June 5, 2026
Friday, June 5, 2026
spot_img

ವಿದೇಶಿ ಶಂಕಿತ ಉಗ್ರನ ಜೊತೆ ನಿರಂತರ ಸಂಪರ್ಕ ಆರೋಪ: ಓರ್ವ ಅರೆಸ್ಟ್, ಮತ್ತೋರ್ವನಿಗಾಗಿ ಶೋಧ

ಹೊಸದಿಗಂತ ತುಮಕೂರು:

ವಿದೇಶಿ ಭಯೋತ್ಪಾದಕ ಸಂಘಟನೆ ಹಾಗೂ ಉಗ್ರರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪದ ಮೇಲೆ ತುಮಕೂರಿನಲ್ಲಿ ಶಂಕಿತ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ರಹಸ್ಯ ಹಾಗೂ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ದೇಶದ ಭದ್ರತೆಗೆ ಧಕ್ಕೆ ತರುತ್ತಿದ್ದ ಶಂಕಿತನನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾಬಕ್ಷು (24) ಎಂದು ಗುರುತಿಸಲಾಗಿದೆ. ಈತ ದೇಶದ ಆಂತರಿಕ ಬೆಳವಣಿಗೆಗಳು ಮತ್ತು ಶಾಂತಿ ಕದಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದ ಎನ್ನಲಾಗಿದೆ.

ಸೋಷಿಯಲ್ ಮೀಡಿಯಾ ಮೂಲಕ ಉಗ್ರರ ಸಂಪರ್ಕ:

ಆರೋಪಿ ಅಲ್ಲಾಬಕ್ಷುಗೆ ಸುಮಾರು 20 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ವಿದೇಶಿ ಶಂಕಿತ ಉಗ್ರನೊಬ್ಬನ ಪರಿಚಯವಾಗಿತ್ತು. ಆರಂಭದಲ್ಲಿ ಆತನ ಪೋಸ್ಟ್‌ಗಳಿಗೆ ಲೈಕ್ ಮತ್ತು ಕಮೆಂಟ್ ಮಾಡುತ್ತಿದ್ದ ಆರೋಪಿ, ನಂತರ ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಆತನೊಂದಿಗೆ ನಿಕಟ ಸಂಪರ್ಕ ಬೆಳೆಸಿದ್ದ. ಇವರಿಬ್ಬರ ನಡುವೆ ದೇಶವಿರೋಧಿ ಚಟುವಟಿಕೆಗಳು ಹಾಗೂ ಭಾರತದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ಗಂಭೀರ ವಿಷಯಗಳ ಕುರಿತು ಚಾಟಿಂಗ್ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕೇಂದ್ರ ತನಿಖಾ ಸಂಸ್ಥೆಗಳ ಬಿಗಿ ನಿಗಾ:

ಅಲ್ಲಾಬಕ್ಷು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿದ್ದ ಅನುಮಾನಾಸ್ಪದ ನಡೆ ಹಾಗೂ ದೇಶವಿರೋಧಿ ಸಂದೇಶಗಳ ಮೇಲೆ ಕೇಂದ್ರ ಇಂಟೆಲಿಜೆನ್ಸ್ ಸಂಸ್ಥೆಗಳು ತೀವ್ರ ನಿಗಾ ಇರಿಸಿದ್ದವು. ಆತನ ಡಿಜಿಟಲ್ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಿದ ತನಿಖಾ ಸಂಸ್ಥೆಗಳು ತಕ್ಷಣವೇ ರಾಜ್ಯ ಪೊಲೀಸರಿಗೆ ಅಲರ್ಟ್ ಸಂದೇಶ ರವಾನಿಸಿದ್ದವು. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ತುಮಕೂರು ನಗರ ಪೊಲೀಸರು ಗುರುವಾರ ರಾತ್ರಿ ಕ್ಯಾತಸಂದ್ರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ.

ಪ್ರಸ್ತುತ ಈ ಕೃತ್ಯದಲ್ಲಿ ಅಲ್ಲಾಬಕ್ಷುಗೆ ಸಾಥ್ ನೀಡಿದ ಹಾಗೂ ಆತನೊಂದಿಗೆ ಸಂಪರ್ಕದಲ್ಲಿದ್ದ ಮತ್ತೊಬ್ಬ ಶಂಕಿತ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !