March 25, 2026
Wednesday, March 25, 2026
spot_img

ಪೆಟ್ರೋಲ್ ಬಂಕ್ ಗಳಲ್ಲಿ ಇದೆಯಾ ಪೆಟ್ರೋಲ್, ಡೀಸೆಲ್ ಗಳ ದಾಸ್ತಾನು? ಏರಿಕೆ ಆಗುತ್ತಾ ಇಂಧನ ಬೆಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:


ದೇಶದಲ್ಲಿ ಕಚ್ಛಾತೈಲದ ಯಾವುದೇ ಕೊರತೆಯಿಲ್ಲ. ಪೆಟ್ರೋಲ್ ಪಂಪ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಗಳ ದಾಸ್ತಾನು ಸಾಕಷ್ಟಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ತಿಳಿಸಿದ್ದಾರೆ.


ದೆಹಲಿಯಲ್ಲಿ ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ಪರಿಸ್ಥಿತಿ ಪರಾಮರ್ಶೆಗಾಗಿ ನಡೆದ ಅಂತರ್ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವು 26 ಕೋಟಿ ಟನ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದದ್ದು, ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬಾರದು. ಭೀತಿಯ ಖರೀದಿಗೆ ಮುಂದಾಗಬಾರದು ಎಂದು ಮನವಿ ಮಾಡಿದರು.


ಸರ್ಕಾರವು ಪಿಎನ್ ಜಿ ಸಂಪರ್ಕಗಳ ಹೆಚ್ಚಳಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕಳೆದ 25 ದಿನಗಳಲ್ಲಿ ದೇಶದಲ್ಲಿ 2.54 ಲಕ್ಷ ಹೊಸ ಪಿಎನ್ ಜಿ ಸಂಪರ್ಕಗಳು ಸೃಷ್ಟಿಯಾಗಿವೆ. ಹೊಟೇಲ್, ರೆಸ್ಟೋರೆಂಟ್, ಸಮುದಾಯ ಕಿಚನ್ ಗಳಿಗೆ ಎಲ್ ಪಿಜಿ ಪೂರೈಕೆಯಲ್ಲಿ ಆದ್ಯತೆ ನೀಡುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಎಲ್ ಪಿಜಿ ಕಾಳಸಂತೆ ತಡೆಯುವಲ್ಲಿ ಕಾರ್ಯೋನ್ಮುಖವಾಗಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಮುಂತಾದೆಡೆ ನಡೆದ ಶೋಧ ಕಾರ್ಯಾಚರಣೆಗಳಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.


ಬಂದರು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಾತನಾಡಿ, ದೇಶದ ಬಂದರುಗಳ ಕಾರ್ಯಚಾರಣೆ ಸಾಮಾನ್ಯವಾಗಿದೆ. ಬಂದರು ಸಚಿವಾಲಯ ದೇಶಾದ್ಯಂತ ಬಂದರು ಹಾಗೂ ಹಡಗುಗಳ ಕಾರ್ಯ ನಿರ್ವಹಣೆ ಮೇಲೆ ತೀವ್ರ ನಿಗಾ ಇರಿಸಿದೆ ಎಂದರು.


ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ. ಉಭಯ ನಾಯಕರು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯ ಪುನರ್ ಸ್ಥಾಪನೆ ಕುರಿತು ಚರ್ಚಿಸಿದರು ಎಂದು ತಿಳಿಸಿದರು. ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆಸಿಮ್ ಮಹಾಜನ್, ಮಧ್ಯಪ್ರಾಚ್ಯದಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೆ ವಿದೇಶಾಂಗ ಸಚಿವಾಲಯದ ವತಿಯಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ವಿದ್ಯಾರ್ಥಿ ಸಮುದಾಯದ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕುವೈತ್ ಹಾಗೂ ಬೆಹ್ರೇನ್ ನಿಂದಲೂ ಭಾರತೀಯರ ವಾಪಸಾತಿಗೆ ವಿಮಾನ ಸೇವೆಗಳನ್ನು ಕಲ್ಪಿಸಲಾಗಿದೆ. ಇಸ್ರೇಲ್ ನಿಂದ ಜೋರ್ಡನ್ ಮಾರ್ಗವಾಗಿ ಭಾರತಕ್ಕೆ ವಾಪಸ್ ಆಗಲು ಭಾರತೀಯ ನಿವಾಸಿಗಳಿಗೆ ಸಹಾಯ ಕಲ್ಪಿಸಲಾಗುತ್ತಿದೆ. ಕಾಣೆಯಾದ ಭಾರತೀಯ ಕುಟುಂಬಳೊಂದಿಗೆ ನಿರಂತರ ಸಂಪರ್ಕ ಇರಿಸಲಾಗಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !