October 9, 2026
Friday, October 9, 2026
spot_img

ಅಮಿತ್ ಶಾ ಭೇಟಿ ಹಿನ್ನೆಲೆ ಬೆಳಗಾವಿಯಲ್ಲಿ ಬಿಗಿ ಭದ್ರತೆ: ವಿಮಾನ ನಿಲ್ದಾಣದ 2 ಕಿ.ಮೀ. ವ್ಯಾಪ್ತಿಯಲ್ಲಿ ‘ನೋ ಫ್ಲೈ ಝೋನ್’

ಹೊಸದಿಗಂತ ವರದಿ ಬೆಳಗಾವಿ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಳಗಾವಿ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಳಗಾವಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯನ್ನು ‘ರೆಡ್ ಝೋನ್–ನೋ ಫ್ಲೈ ಝೋನ್’ ಎಂದು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

ಅಮಿತ್ ಶಾ ಅವರು ಸೆ. 19 ರಂದು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದ್ದು, ಅವರಿಗೆ ಝಡ್ ಪ್ಲಸ್ ಸಿಆರ್ಪಿಎಫ್ ಭದ್ರತೆ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಸಂಚಾರ ಮಾರ್ಗ ಹಾಗೂ ಕಾರ್ಯಕ್ರಮ ನಡೆಯುವ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ:

ವಿಮಾನ ನಿಲ್ದಾಣದ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಮಾನವರಹಿತ ವೈಮಾನಿಕ ವಾಹನಗಳು (ಯುಎವಿ), ಮಾನವರಹಿತ ವಿಮಾನ ವ್ಯವಸ್ಥೆಗಳು (ಯುಎಎಸ್), ಡ್ರೋನ್ ಗಳು ಹಾಗೂ ಪ್ಯಾರಾಗ್ಲೈಡರ್ಗಳ ಹಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸೆ. 19ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮಕ್ಕೆ ಅಮಿತ್ ಶಾ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಬಂಧ ಜಾರಿಗೊಳಿಸಲಾಗಿದೆ. ಸಚಿವರ ಭೇಟಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

Must Read