ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಮಾರ್ಚ್ 18ರಿಂದಲೇ ಎಸ್ಎಸ್ಎಲ್ಸಿ ಪರೀಕ್ಷೆ ಶುರುವಾಗಿದೆ. ಈಗಾಗಲೇ ಕೆಲವು ಪರೀಕ್ಷೆಗಳು ಸುಸೂತ್ರವಾಗಿ ಮುಗಿದಿವೆ. ಆದರೆ, ಒಂದು ಮುಖ್ಯ ಬದಲಾವಣೆ! ಮಾರ್ಚ್ 30ರಂದು ನಡೆಯಬೇಕಿದ್ದ ಹಿಂದಿ (ತೃತೀಯ ಭಾಷೆ) ಪರೀಕ್ಷೆಯನ್ನು ಒಂದು ದಿನ ಮುಂದೂಡಲಾಗಿದೆ.
ಸರ್ಕಾರವು ಮೊದಲು ಮಾರ್ಚ್ 31ರಂದು ನೀಡಿದ್ದ ‘ಮಹಾವೀರ ಜಯಂತಿ’ ರಜೆಯನ್ನು ಈಗ ಮಾರ್ಚ್ 30ಕ್ಕೆ (ಸೋಮವಾರ) ಬದಲಾಯಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪರೀಕ್ಷಾ ವೇಳಾಪಟ್ಟಿಯಲ್ಲೂ ಚಿಕ್ಕ ಬದಲಾವಣೆ ಮಾಡಿದೆ.
ಹೊಸ ವೇಳಾಪಟ್ಟಿ ಹೀಗಿದೆ:
ಹಳೆಯ ದಿನಾಂಕ: ಮಾರ್ಚ್ 30, ಸೋಮವಾರ (ಈಗ ರಜೆ).
ಹೊಸ ದಿನಾಂಕ: ಮಾರ್ಚ್ 31, ಮಂಗಳವಾರ.
ಸಮಯ: ಎಂದಿನಂತೆ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ.
ಗಮನಿಸಿ ಮಾರ್ಚ್ 31ರ ಪರೀಕ್ಷೆಯನ್ನು ಹೊರತುಪಡಿಸಿ, ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ಮೊದಲೇ ನಿಗದಿಯಾದ ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯಲಿವೆ.
ಈ ಬಾರಿ ರಾಜ್ಯದ 2,871 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಸುಮಾರು 8.16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.



