ಹೊಸದಿಗಂತ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕೊಳವಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತನನ್ನು ವೀರಭದ್ರ ಎಂಬುವವರ ಪುತ್ರ ಸುನೀಲ್ (23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಸುನೀಲ್, ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಸಂಜೆ 5 ಗಂಟೆಗೆ ಹೊರಟಿದ್ದನು. ರಾತ್ರಿ 11 ಗಂಟೆಯ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಆತ ಮದ್ಯ ಸೇವಿಸಿದ್ದ ಎನ್ನಲಾಗಿದೆ.
ಮನೆಗೆ ಬಂದ ಬಳಿಕ ತಂದೆ-ತಾಯಿಯೊಂದಿಗೆ ಜಗುಲಿಯ ಮೇಲೆ ಕುಳಿತು ಹರಟೆ ಹೊಡೆದಿದ್ದಾನೆ. ತಂದೆ ಮಲಗಲು ಹೋದ ನಂತರ, ಅಣ್ಣ ಸುಮಂತ್ ಹಾಗೂ ತಾಯಿ ಜಗುಲಿಯಲ್ಲೇ ಮಾತು ಮುಂದುವರಿಸಿದ್ದರು. 11:30ರ ಸುಮಾರಿಗೆ ಮನೆಯೊಳಗೆ ಹೋಗಿ ನೋಡಿದಾಗ, ಸುನೀಲ್ ಹಾಲ್‌ನಲ್ಲಿದ್ದ ಕಬ್ಬಿಣದ ರಾಡಿಗೆ ಬೆಡ್‌ಶೀಟ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಕೂಡಲೇ ಕುಟುಂಬಸ್ಥರು ಹಾಗೂ ಪಕ್ಕದ ಮನೆಯವರ ಸಹಾಯದಿಂದ ಆತನನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಸುನೀಲ್ ಈಗಾಗಲೇ ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ.
ಮೃತ ಸುನೀಲ್ ಒಬ್ಬ ಪ್ರತಿಭಾವಂತ ಕಬಡ್ಡಿ ಕ್ರೀಡಾಪಟುವಾಗಿದ್ದನು. ಆದರೆ ಕುಟುಂಬದವರ ಪ್ರಕಾರ, ಆತ ಮದ್ಯಪಾನಕ್ಕೆ ದಾಸನಾಗಿದ್ದರಿಂದ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಸಾವಿನ ನಿಖರ ಕಾರಣ ಇನ್ನೂ ನಿಗೂಢವಾಗಿದ್ದು, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.



