ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಸಿನಿರಂಗ ಪ್ರವೇಶಿಸಿ, ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಭರ್ಜರಿ ಯಶಸ್ಸಿನೊಂದಿಗೆ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದವರು ನಟಿ ನಭಾ ನಟೇಶ್. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅವರು ದಿಢೀರನೆ ಚಿತ್ರರಂಗದಿಂದ ಎರಡು ವರ್ಷಗಳ ಕಾಲ ಕಾಣೆಯಾಗಿದ್ದರು. ಇದಕ್ಕೆ ಕಾರಣವಾದ ಭೀಕರ ಅಪಘಾತದ ಕಹಿ ನೆನಪುಗಳನ್ನು ನಭಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಚೂರುಚೂರಾಗಿದ್ದ ಭುಜದ ಮೂಳೆ; ನರಕಯಾತನೆ ತಂದ ಶಸ್ತ್ರಚಿಕಿತ್ಸೆ!
ಮೆಟ್ಟಿಲುಗಳಿಂದ ಜಾರಿಬೀಳುವಾಗ ತಲೆಗೆ ಪೆಟ್ಟಾಗದಂತೆ ತಪ್ಪಿಸಿಕೊಳ್ಳಲು ಹೋದಾಗ, ನಭಾ ಅವರ ಇಡೀ ದೇಹದ ತೂಕ ಎಡ ಭುಜದ ಮೇಲೆ ಬಿದ್ದಿತ್ತು. ಪರಿಣಾಮ ಭುಜದ ಒಳಗಿನ ಮೂಳೆಗಳು ಸಣ್ಣ ಸಣ್ಣ ತುಂಡುಗಳಾಗಿ ಒಡೆದು ಹೋಗಿದ್ದವು. ಕೇವಲ ಫ್ರ್ಯಾಕ್ಚರ್ ಅಂದುಕೊಂಡಿದ್ದ ಅವರಿಗೆ ದೊಡ್ಡ ಶಸ್ತ್ರಚಿಕಿತ್ಸೆ ನಡೆಸಿ, ಭುಜದ ಮೂಳೆ ಜೋಡಿಸಲು ಸ್ಟೀಲ್ ರಾಡ್ ಹಾಗೂ ಸ್ಕ್ರೂಗಳನ್ನು ಅಳವಡಿಸಲಾಯಿತು. ಕೈಯಲ್ಲಿದ್ದ ಸಾಲು ಸಾಲು ಸಿನಿಮಾಗಳನ್ನು ಕಳೆದುಕೊಂಡು, ಸಂಪೂರ್ಣ ಬೆಡ್ ರೆಸ್ಟ್ ಮತ್ತು ಫಿಸಿಯೋಥೆರಪಿಗೆ ಸೀಮಿತವಾದದ್ದು ಅವರಲ್ಲಿ ತೀವ್ರ ಮಾನಸಿಕ ಒತ್ತಡ ಉಂಟುಮಾಡಿತ್ತು.
ಕಷ್ಟದ ದಿನಗಳನ್ನೇ ಸಕಾರಾತ್ಮಕವಾಗಿ ಬದಲಿಸಿಕೊಂಡ ನಟಿ!
ಆದರೆ, ಈ ಕಠಿಣ ಪರಿಸ್ಥಿತಿಗೆ ಧೃತಿಗೆಡದ ನಭಾ, ಆ ವಿರಾಮವನ್ನು ಧನಾತ್ಮಕವಾಗಿ ಬಳಸಿಕೊಂಡರು. ಹಾಸಿಗೆ ಹಿಡಿದಿದ್ದ ದಿನಗಳಲ್ಲಿ ಚಿತ್ರಕಲೆ, ನೃತ್ಯ, ಸಂಗೀತ, ಶಿಲ್ಪಕಲೆ ಮತ್ತು ಪುಸ್ತಕ ಓದುವುದರಲ್ಲಿ ತೊಡಗಿಸಿಕೊಂಡರು. ಕುಟುಂಬದವರ ಬೆಂಬಲದೊಂದಿಗೆ ಮಾನಸಿಕವಾಗಿ ಸದೃಢರಾದರು. “ಸಿನಿಮಾ ಎನ್ನುವುದು ಕೇವಲ ಓಟದ ರೇಸ್ ಅಲ್ಲ, ಅದೊಂದು ಸೃಜನಶೀಲ ಅನುಭವ” ಎಂಬುದನ್ನು ಈ ಕಷ್ಟದ ದಿನಗಳು ತಮಗೆ ಕಲಿಸಿಕೊಟ್ಟಿವೆ ಎಂದು ನಭಾ ಭಾವುಕರಾಗಿ ನುಡಿದಿದ್ದಾರೆ.



