March 27, 2026
Friday, March 27, 2026
spot_img

ರಘುವಂಶದ ಕುಡಿಗೆ ಸೂರ್ಯರಶ್ಮಿಯ ತಿಲಕಧಾರಣೆ: ಅಯೋಧ್ಯೆಯಲ್ಲಿ ಮೈಮನ ಪುಳಕಿತಗೊಳಿಸಿದ ದಿವ್ಯ ದೃಶ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮನವಮಿಯ ಸಡಗರ ಮುಗಿಲು ಮುಟ್ಟಿದೆ. ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಿ ಭಕ್ತರ ಕಣ್ಮನ ಸೆಳೆದಿದ್ದು ‘ಸೂರ್ಯ ತಿಲಕ’ ಎಂಬ ಅದ್ಭುತ ಚಮತ್ಕಾರ.

ನಿಖರವಾಗಿ ಮಧ್ಯಾಹ್ನ 12 ಗಂಟೆಗೆ, ಸೂರ್ಯನ ಕಿರಣಗಳು ನೇರವಾಗಿ ಬಾಲರಾಮನ ವಿಗ್ರಹದ ಹಣೆಯ ಮೇಲೆ ಬಿದ್ದವು. ಸುಮಾರು 3 ರಿಂದ 4 ನಿಮಿಷಗಳ ಕಾಲ ರಾಮಲಲ್ಲಾನ ಹಣೆಯ ಮೇಲೆ ಸೂರ್ಯ ರಶ್ಮಿಯು ದಿವ್ಯ ತಿಲಕದಂತೆ ಶೋಭಿಸಿತು. ವಿಜ್ಞಾನ ಮತ್ತು ಅಧ್ಯಾತ್ಮದ ಈ ಸಂಗಮವನ್ನು ಕಂಡು ಭಕ್ತರು ಮೈಮರೆತು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು.

ರಾಮನ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಭಕ್ತರು ಅಯೋಧ್ಯೆಯತ್ತ ಧಾವಿಸುತ್ತಿದ್ದಾರೆ. ಕೇವಲ ತಡರಾತ್ರಿಯಲ್ಲೇ 2 ಲಕ್ಷಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದಿದ್ದು, ಇಂದು ರಾತ್ರಿ 10 ಗಂಟೆಯವರೆಗೂ ಭಕ್ತರಿಗೆ ಮುಕ್ತ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮತ್ತೊಂದೆಡೆ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ಈ ದಿನದಂದು ವಿಷ್ಣುವಿನ 7ನೇ ಅವತಾರವಾದ ಶ್ರೀರಾಮನ ಜನ್ಮದಿನವನ್ನು ದೇಶಾದ್ಯಂತ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಮನೆ-ಮನೆಗಳಲ್ಲಿ ಪೂಜೆ, ದೇವಸ್ಥಾನಗಳಲ್ಲಿ ಭಜನೆ ಮತ್ತು ನಗರಗಳಲ್ಲಿ ನಡೆಯುತ್ತಿರುವ ಶೋಭಾಯಾತ್ರೆಗಳು ರಾಮರಾಜ್ಯದ ಕಲ್ಪನೆಯನ್ನು ನೆನಪಿಸುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !