ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ನಿರಂತರ ಬಲವಾದ ಗಾಳಿ ಬೀಸಲಿದ್ದು, ಸಾರ್ವಜನಿಕರು ಮತ್ತು ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಕರಾವಳಿ ಭಾಗದಲ್ಲಿ ನಿರಂತರ ಗಾಳಿ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ನಿರಂತರ ಬಲವಾದ ಗಾಳಿ ಬೀಸಲಿದ್ದು, ಇದರೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನಲ್ಲಿ ಗಾಳಿಯೊಂದಿಗೆ ಹಗುರ ಮಳೆ
ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗಂಟೆಗೆ 30 ರಿಂದ 40ಕಿ.ಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆ
ಧಾರವಾಡ ಮತ್ತು ಗದಗ ಜಿಲ್ಲೆಯಒಂದೆರಡು ಕಡೆ ಗಂಟೆಗೆ 40 ರಿಂದ 50ಕಿ.ಮೀ ವೇಗದ ಅತ್ಯಂತ ಬಲವಾದ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನು, ಬೆಳಗಾವಿ, ಹಾವೇರಿ ಮತ್ತು ಕೊಪ್ಪಳದಒಂದೆರಡು ಕಡೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಹಗುರ ಮಳೆಯಾಗಬಹುದು ಹಾಗೂ ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಗಿಂತ ಹೆಚ್ಚಾಗಿ ಗಂಟೆಗೆ 40 ರಿಂದ 50ಕಿ.ಮೀ ವೇಗದ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ ಹವಾಮಾನ ಇಲಾಖೆ ತಿಳಿಸಿದೆ.



