ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಹಿಂದಿ ಭಾಷೆಯ ಪರೀಕ್ಷೆ ಮತ್ತು ಪಾಸ್ ಆಗುವುದನ್ನು ಕಡ್ಡಾಯಗೊಳಿಸಬಾರದು ಎಂಬ ಒತ್ತಾಯ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರದ (ಕನ್ನಡ, ಇಂಗ್ಲಿಷ್ ಮತ್ತು ಹಿಂದಿ) ಬದಲಾಗಿ, ಕೇವಲ ಎರಡು ಭಾಷೆಗಳನ್ನಷ್ಟೇ ಒಳಗೊಂಡ ‘ದ್ವಿಭಾಷಾ ಸೂತ್ರ’ವನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ.
ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿವಾಸಕ್ಕೆ ಕರವೇ ಶಿವರಾಮೇಗೌಡ ಹಾಗೂ ಸಾರಾ ಗೋವಿಂದ್ ನೇತೃತ್ವದ ಕನ್ನಡ ಪರ ಸಂಘಟನೆಗಳ ನಿಯೋಗ ಭೇಟಿ ನೀಡಿತು. ವಿದ್ಯಾರ್ಥಿಗಳ ಮೇಲೆ ಅನಗತ್ಯವಾಗಿ ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ, ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಆದ್ದರಿಂದ ಕೂಡಲೇ ಹಿಂದಿ ಪಾಸ್ ಮಾಡುವುದನ್ನು ಕಡ್ಡಾಯ ಪಟ್ಟಿಯಿಂದ ಕೈಬಿಟ್ಟು, ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಹಿಂದಿ ಭಾಷೆಯ ಅವಶ್ಯಕತೆ ಇಲ್ಲ ಎಂಬುದು ಕನ್ನಡ ಪರ ಸಂಘಟನೆಗಳ ವಾದವಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸಕಾರಾತ್ಮಕವಾಗಿದ್ದು, ದ್ವಿಭಾಷಾ ಸೂತ್ರ ಜಾರಿಗೆ ತಂದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ, ಇದು ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಿರುವುದರಿಂದ ಶಿಕ್ಷಕರು, ತಜ್ಞರು ಮತ್ತು ಮುಖ್ಯಮಂತ್ರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.



