March 28, 2026
Saturday, March 28, 2026
spot_img

ಲಾರಿ-ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಯುವಕರು ಸ್ಥಳದಲ್ಲೇ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೇ ಬೈಕ್‌ನಲ್ಲಿ ನೈಟ್ ರೈಡ್ ಹೊರಟಿದ್ದ ಮೂವರು ವಿದ್ಯಾರ್ಥಿಗಳ ಪಾಲಿಗೆ ಶುಕ್ರವಾರದ ರಾತ್ರಿ ವಿಧಿಯಾಟವಾಗಿ ಪರಿಣಮಿಸಿದೆ. ತಾಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಲಾರಿಗೆ ಬೈಕ್ ಡಿಕ್ಕಿಯಾದ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಬೆಂಗಳೂರಿನ ಪಿಜಿಯಲ್ಲಿ ನೆಲೆಸಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ (21) ಹಾಗೂ ಮನೋಜ್ (21) ಮೃತಪಟ್ಟ ದುರ್ದೈವಿಗಳು. ಇವರೊಂದಿಗೆ ಪ್ರಯಾಣಿಸುತ್ತಿದ್ದ ನವೀನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಮೂವರೂ ಸ್ನೇಹಿತರು ಒಂದೇ ಬೈಕ್ ಏರಿ ಬೆಂಗಳೂರಿನಿಂದ ಕುಣಿಗಲ್ ಕಡೆಗೆ ನೈಟ್ ರೈಡ್ ಹೊರಟಿದ್ದರು. ಈ ವೇಳೆ ಮರೂರು ಹ್ಯಾಂಡ್ ಪೋಸ್ಟ್ ಸಮೀಪ ವೇಗವಾಗಿ ಬಂದ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕುದೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !