March 28, 2026
Saturday, March 28, 2026
spot_img

ಇರಾನ್ ಸಹಕಾರ ನೀಡದಿದ್ರೆ ಚರಂಡಿಯಲ್ಲಿ ಗ್ಯಾಸ್ ಮಾಡಬೇಕಿತ್ತು: ಎಂ.ಬಿ.ಪಾಟೀಲ್ ವ್ಯಂಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ರಾಜ್ಯದ ಕೈಗಾರಿಕೆಗಳ ಮೇಲೆ ಉಂಟಾಗಿರುವ ತೈಲ ಕೊರತೆಯ ಪರಿಣಾಮದ ಕುರಿತು ಮಾತನಾಡುವ ವೇಳೆ, ಸಚಿವ ಎಂ.ಬಿ. ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀಕ್ಷ್ಣವಾದ ಲೇವಡಿ ಮಾಡಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಪ್ರವಾಸ ಹೋಗಿದ್ದರು. ಅಲ್ಲಿ ಇಸ್ರೇಲ್ ಅನ್ನು ‘ಫಾದರ್ ಲ್ಯಾಂಡ್’ ಎಂದು ಹೊಗಳಿದ್ದರು. ಆದರೆ ವಿಪರ್ಯಾಸವೆಂದರೆ ಅವರು ಪ್ರವಾಸ ಮುಗಿಸಿ ಬಂದ ಮರುದಿನವೇ ಅಲ್ಲಿ ಯುದ್ಧ ಆರಂಭವಾಯಿತು,” ಎಂದು ಸಚಿವರು ಹೇಳಿದರು. ಪ್ರಧಾನಿಯವರ ವಿದೇಶಾಂಗ ನೀತಿ ಮತ್ತು ಇಸ್ರೇಲ್ ಮೇಲಿನ ಪ್ರೇಮವನ್ನು ಸಚಿವರು ಈ ಮೂಲಕ ವ್ಯಂಗ್ಯವಾಡಿದರು.

ತೈಲ ಮತ್ತು ಎಲ್‌ಪಿಜಿ ಪೂರೈಕೆಯಲ್ಲಿ ಇರಾನ್ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದ ಅವರು, “ಇರಾನ್‌ನವರು ನಮ್ಮ ಹಡಗುಗಳನ್ನು ಬಿಟ್ಟುಕೊಟ್ಟಿದ್ದಾರೆ. ಭಾರತೀಯರು ನಮ್ಮ ಸ್ನೇಹಿತರು ಎಂಬ ನಿಲುವನ್ನು ಅವರು ತಳೆದಿದ್ದಾರೆ. ನಾವು ಸಂಬಂಧಗಳ ವಿಷಯದಲ್ಲಿ ಎಡವಿರಬಹುದು, ಆದರೆ ಇರಾನ್ ಆ ಕೆಲಸ ಮಾಡಿಲ್ಲ,” ಎಂದರು.

ಇರಾನ್ ಸಂಕಷ್ಟದ ಸಮಯದಲ್ಲಿ ಎಲ್‌ಪಿಜಿ ನೀಡಿ ಸಹಕರಿಸದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ ಸಚಿವರು, “ಒಂದು ವೇಳೆ ಇರಾನ್ ನಮಗೆ ಗ್ಯಾಸ್ ನೀಡದಿದ್ದರೆ ನಾವು ಚರಂಡಿಯಲ್ಲಿ ಗ್ಯಾಸ್ ತಯಾರಿಸಬೇಕಾದ ಅನಿವಾರ್ಯತೆ ಇರುತ್ತಿತ್ತು,” ಎಂದು ಪ್ರಧಾನಿಯವರ ಹಳೆಯ ಹೇಳಿಕೆಯೊಂದನ್ನು ನೆನಪಿಸುತ್ತಾ ಕಾಲೆಳೆದರು.

ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ರಾಜ್ಯದ ಕೈಗಾರಿಕೆಗಳಿಗೆ ತೈಲ ಕೊರತೆ ಎದುರಾಗಿದ್ದು, ಉತ್ಪಾದನಾ ವಲಯವು ಸಂಕಷ್ಟಕ್ಕೆ ಸಿಲುಕಿದೆ ಎಂಬ ಕಳವಳವನ್ನು ಈ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !