ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಈ ಕುರಿತು ಸಿದ್ಧಪಡಿಸಲಾಗಿರುವ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಶೀಘ್ರದಲ್ಲೇ ಅಧಿಕೃತ ಖಾತೆ ಹಂಚಿಕೆ ಪಟ್ಟಿ ಸಾರ್ವಜನಿಕವಾಗಿ ಬಿಡುಗಡೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಗುರುವಾರ ಸಂಜೆ ವಿಧಾನಸೌಧಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು, ನಾಡಿನ ಹೆಮ್ಮೆಯ ಕುವರರು ಹಾಗೂ ಗಣ್ಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವಿಧಾನಸೌಧದ ಆವರಣದಲ್ಲಿರುವ ಕನ್ನಡಾಂಬೆ ತಾಯಿ ಭುವನೇಶ್ವರಿ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸ್, ಕೆ.ಸಿ. ರೆಡ್ಡಿ, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ಹಾಗೂ ರಾಷ್ಟ್ರ ನಾಯಕರಾದ ಡಾ. ಬಾಬು ಜಗಜೀವನ್ ರಾಮ್, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿಗಳ ಭೇಟಿ, ಸಲಹೆ ಪಡೆಯಲು ಸಿಎಂ ನಿರ್ಧಾರ!
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, “ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರನ್ನು ಹಾಗೂ ಹಿರಿಯರನ್ನು ಸ್ಮರಿಸುವುದು ನನ್ನ ಆದ್ಯ ಕರ್ತವ್ಯ. ಕೆಂಗಲ್ ಹನುಮಂತಯ್ಯ ಮತ್ತು ನಿಜಲಿಂಗಪ್ಪ ಅವರಂತಹ ಮೇರು ನಾಯಕರ ಆಡಳಿತ ನಮಗೆ ಸದಾ ಪ್ರೇರಣೆ” ಎಂದರು.
ಮುಂದುವರಿದು ಮಾತನಾಡಿದ ಅವರು, ರಾಜ್ಯದ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಮಾಜಿ ಮುಖ್ಯಮಂತ್ರಿಗಳ ಅನುಭವವನ್ನು ಬಳಸಿಕೊಳ್ಳಲಾಗುವುದು. ನಾಳೆಯಿಂದ ಮಾಜಿ ಸಿಎಂಗಳಾದ ಡಿ.ವಿ. ಸದಾನಂದ ಗೌಡ ಸೇರಿದಂತೆ ಹಲವರನ್ನು ಭೇಟಿ ಮಾಡಲಿದ್ದೇನೆ. ಎಚ್.ಡಿ. ಕುಮಾರಸ್ವಾಮಿ ಅವರು ಲಭ್ಯವಿದ್ದಾಗ ಅವರನ್ನೂ ಭೇಟಿಯಾಗಿ, ಅವರ ಆಡಳಿತಾತ್ಮಕ ಅನುಭವ ಹಾಗೂ ಪ್ರಮುಖ ಸಲಹೆಗಳನ್ನು ಪಡೆದುಕೊಳ್ಳಲಿದ್ದೇನೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.



