ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಟಿಕೆಟ್ ಹಂಚಿಕೆಯ ಚರ್ಚೆ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ. ಶಾಸಕರ ಬೇಡಿಕೆಗೆ ಮಿಂಚಿನ ವೇಗದಲ್ಲಿ ಸ್ಪಂದಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಪ್ರತಿಯೊಬ್ಬ ಶಾಸಕರಿಗೂ ಟಿಕೆಟ್ ನೀಡಲು ಸಮ್ಮತಿಸಿದೆ. ಆದರೆ, ಈ ನಿರ್ಧಾರ ರಾಜಕೀಯ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸದನದಲ್ಲಿ ಶಾಸಕರಿಗೆ ಐಪಿಎಲ್ ಟಿಕೆಟ್ ಸಿಗುತ್ತಿಲ್ಲ ಎಂಬ ಬಗ್ಗೆ ಧ್ವನಿ ಎತ್ತಿದ್ದರು. ಇದಕ್ಕೆ ಸ್ಪಂದಿಸಿದ ಕೆಎಸ್‌ಸಿಎ, ಕೇವಲ 24 ಗಂಟೆಗಳಲ್ಲಿ ನಿರ್ಧಾರ ಪ್ರಕಟಿಸಿದೆ. ಸದ್ಯ ಉದ್ಘಾಟನಾ ಪಂದ್ಯಕ್ಕೆ ತಲಾ 3 ಟಿಕೆಟ್ (2+1) ನೀಡಲು ಒಪ್ಪಿರುವ ಸಂಸ್ಥೆ, ಮುಂದಿನ ಪಂದ್ಯಗಳಿಗೆ ಶಾಸಕರಿಗೆ ತಲಾ 5 ಟಿಕೆಟ್ ನೀಡುವ ಭರವಸೆ ನೀಡಿದೆ.
ಒಂದೆಡೆ ಟಿಕೆಟ್‌ಗಾಗಿ ಬೇಡಿಕೆ ಸಲ್ಲಿಕೆಯಾಗಿದ್ದರೆ, ಇನ್ನೊಂದೆಡೆ ಬಿಜೆಪಿಯ ಪ್ರಮುಖ ನಾಯಕರು ಈ ‘ಉಚಿತ ಟಿಕೆಟ್’ ಸಂಸ್ಕೃತಿಗೆ ಬ್ರೇಕ್ ಹಾಕಿದ್ದಾರೆ.
ಶಾಸಕ ಎಸ್. ಸುರೇಶ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ, “ಜನರ ತೆರಿಗೆ ಹಣದಲ್ಲಿ ನಡೆಯುವ ಸದನದಲ್ಲಿ ಟಿಕೆಟ್‌ಗಾಗಿ ಚರ್ಚೆ ಮಾಡುವುದು ಸರಿಯಲ್ಲ, ನಾನು ಯಾವುದೇ ಟಿಕೆಟ್ ಪಡೆಯುವುದಿಲ್ಲ” ಎಂದು ಘೋಷಿಸಿದ್ದಾರೆ.
ಸಾರ್ವಜನಿಕರು ಕೂಡ “ಬರಗಾಲ, ಕುಡಿಯುವ ನೀರಿನಂತಹ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಶಾಸಕರು, ಐಪಿಎಲ್ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವುದು ದುರಂತ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



