ಹೊಸದಿಗಂತ ಕಲಬುರಗಿ:
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಂಬರುವ ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರ್ಕಾರವು ಒಳಮೀಸಲಾತಿ ವಿಚಾರದಲ್ಲಿ ಗೊಂದಲ ಮೂಡಿಸಿದೆ ಮತ್ತು ದಾವಣಗೆರೆಯಲ್ಲಿ ಕೇವಲ ಶ್ರೀಮಂತರಿಗೆ ಟಿಕೆಟ್ ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದರು. ಈ ಅಸಮಾಧಾನದಿಂದಾಗಿ ಈ ಬಾರಿ ಮುಸ್ಲಿಂ ಮತದಾರರು ಬಿಜೆಪಿಯತ್ತ ಬರಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಮೈಸೂರಿನ ಡ್ರಗ್ಸ್ ಪ್ರಕರಣವೇ ಸಾಕ್ಷಿ. “ಬೇರೆ ರಾಜ್ಯದ ಪೊಲೀಸರು ಬಂದು ಇಲ್ಲಿ ದಾಳಿ ನಡೆಸುತ್ತಿದ್ದಾರೆ ಎಂದರೆ ನಮ್ಮ ರಾಜ್ಯದ ಇಂಟೆಲಿಜೆನ್ಸ್ ಮತ್ತು ಗೃಹ ಇಲಾಖೆ ಎಲ್ಲಿಗೆ ಹೋಗಿದೆ?” ಎಂದು ಪ್ರಶ್ನಿಸಿದ ಅವರು, ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರದೀಪ್ ಈಶ್ವರ್ ಅವರನ್ನು “ಜೋಕರ್” ಎಂದು ಕರೆದ ನಾರಾಯಣಸ್ವಾಮಿ, ಕಾಂಗ್ರೆಸ್‌ನಲ್ಲಿ ಗಂಭೀರತೆಯ ಕೊರತೆಯಿದೆ ಎಂದರು. ರಾಹುಲ್ ಗಾಂಧಿ ಮತ್ತು ಪ್ರದೀಪ್ ಈಶ್ವರ್ ಅವರಂತಹ ನಾಯಕರು ಎಲ್ಲೆಲ್ಲಿ ಪ್ರಚಾರ ಮಾಡುತ್ತಾರೋ ಅಲ್ಲೆಲ್ಲಾ ಬಿಜೆಪಿಗೆ ಲಾಭವಾಗುತ್ತಿದೆ ಎಂದು ಕಾಲೆಳೆದರು.
ಇರಾನ್-ಇಸ್ರೇಲ್ ಯುದ್ಧದ ಸವಾಲುಗಳ ನಡುವೆಯೂ ಪ್ರಧಾನಿ ಮೋದಿ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಸಭೆಗಳಿಗೆ ಹಾಜರಾಗದೆ ಕೇವಲ ಆರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.



