September 30, 2026
Wednesday, September 30, 2026
spot_img

FOOD | ಮಂಗಳೂರು ಸ್ಟೈಲ್ ಬಿಸಿ ಬಿಸಿ ಗೆಣಸಿನ ಪೋಡಿ-ಚಹಾ, ಯಾರು ಬೇಡ ಅಂತಾರೆ ಹೇಳಿ?

ಮಂಗಳೂರು ಭಾಗದಲ್ಲಿ ಸಿಹಿ ಗೆಣಸು ಬಳಸಿ ಮಾಡುವ ತಿನಿಸುಗಳಿಗೆ ತಮ್ಮದೇ ಆದ ವಿಶೇಷ ರುಚಿ ಇರುತ್ತದೆ. ಅದರಲ್ಲಿ ಸಿಹಿ ಗೆಣಸಿನ ಪೋಡಿ ರುಚಿ ಹೇಳುದೇ ಬೇಡ. ಅಷ್ಟು ಅದ್ಭುತ. ಸಂಜೆ ಸ್ನ್ಯಾಕ್ ಆಗಿಯೂ ಸವಿಯಲು ತುಂಬಾ ಚೆನ್ನಾಗಿರುತ್ತದೆ.

ಬೇಕಾಗುವ ಪದಾರ್ಥಗಳು
ಸಿಹಿ ಗೆಣಸು – 1 ರಿಂದ 2
ಕಡ್ಲೆ ಹಿಟ್ಟು – ½ ಕಪ್
ಅಕ್ಕಿ ಹಿಟ್ಟು – 2 ರಿಂದ 3 ಚಮಚ
ಖಾರದ ಪುಡಿ – 1 ಚಮಚ
ಅರಿಶಿನ – ಒಂದು ಚಿಟಿಕೆ
ಓಂಕಾಳು – ¼ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಬೇಕಾದಷ್ಟು
ತೆಂಗಿನ ಎಣ್ಣೆ – ಕರಿಯಲು

ಮಾಡುವ ವಿಧಾನ

ಮೊದಲು ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಮಧ್ಯಮ ದಪ್ಪದ ಸ್ಲೈಸ್‌ಗಳಾಗಿ ಕತ್ತರಿಸಿ ಇಡಿ. ತುಂಬಾ ತೆಳ್ಳಗೆ ಕತ್ತರಿಸಬೇಡಿ. ಮಧ್ಯಮ ದಪ್ಪ ಇದ್ದರೆ ಕರಿದಾಗ ಚೆನ್ನಾಗಿ ಬರುತ್ತದೆ.

ಈಗ ಒಂದು ಬಟ್ಟಲಿನಲ್ಲಿ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಅರಿಶಿನ, ಓಂಕಾಳು ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ದಪ್ಪನೆಯ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕತ್ತರಿಸಿದ ಸಿಹಿ ಗೆಣಸಿನ ಚೂರುಗಳನ್ನು ಹಿಟ್ಟಿನಲ್ಲಿ ಚೆನ್ನಾಗಿ ಅದ್ದಿ ಬಿಸಿ ಎಣ್ಣೆಗೆ ಹಾಕಿ.

ಮಧ್ಯಮ ಉರಿಯಲ್ಲಿ ಎರಡೂ ಬದಿಗಳೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ. ಹೊರಗೆ ಗರಿಗರಿ ಆಗಿ ಬಂದ ಮೇಲೆ ತೆಗೆದು ಟಿಷ್ಯೂ ಮೇಲೆ ಇಡಿ.

ಬಿಸಿ ಬಿಸಿ ಪೋಡಿಯನ್ನು ಸಂಜೆ ಚಹಾ ಅಥವಾ ಕಾಫಿಯ ಜೊತೆ ಸವಿದರೆ ಮಸ್ತ್ ರುಚಿ.

Must Read