September 30, 2026
Wednesday, September 30, 2026
spot_img

ಕ್ಯಾಬ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಿ: ಓಲಾ, ಉಬರ್, ರ‍್ಯಾಪಿಡೋಗೆ ದೆಹಲಿ ಹೈಕೋರ್ಟ್ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಓಲಾ, ಉಬರ್‌ನಂತಹ ಆ್ಯಪ್ ಆಧಾರಿತ ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್, ಬುಧವಾರ ಉಬರ್, ಓಲಾ, ರ‍್ಯಾಪಿಡೋ ಸಂಸ್ಥೆಗಳು ಸೇರಿದಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ.

ಕ್ಯಾಬ್ ಆ್ಯಪ್‌ಗಳನ್ನು ನಡೆಸುವ ಖಾಸಗಿ ಸಂಸ್ಥೆಗಳನ್ನು ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಹೆಚ್ಚು ಹೊಣೆಗಾರರನ್ನಾಗಿ ಮಾಡುವುದು ನಮ್ಮ ಮುಖ್ಯ ಉದ್ದೇಶ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಖಾಸಗಿ ಆಪರೇಟರ್‌ಗಳೇ ಹೊಣೆ: ಕೋರ್ಟ್ ಎಚ್ಚರಿಕೆ

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ವಿಚಾರಣೆ ವೇಳೆ ಮಾತನಾಡಿದ ನ್ಯಾಯಪೀಠ, ʼಕ್ಯಾಬ್ ಸೇವೆ ನೀಡುವ ಖಾಸಗಿ ಆಪರೇಟರ್‌ಗಳನ್ನು ಪ್ರಯಾಣಿಕರ ಸುರಕ್ಷತಾ ವ್ಯವಸ್ಥೆಗೆ ಜವಾಬ್ದಾರರನ್ನಾಗಿ ಮಾಡಲು ನಾವು ಬಯಸುತ್ತೇವೆ. ಇದೇ ಕಾರಣಕ್ಕೆ ನೋಟಿಸ್ ನೀಡುತ್ತಿದ್ದೇವೆʼ ಎಂದು ತಿಳಿಸಿದೆ. ಎಲ್ಲಾ ಕಕ್ಷಿದಾರರಿಗೆ ತಕ್ಷಣವೇ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಡಿಸೆಂಬರ್ 16 ಕ್ಕೆ ನಿಗದಿಪಡಿಸಿದೆ.

ಅರ್ಜಿದಾರರ ಪ್ರಮುಖ ಆರೋಪಗಳೇನು

ಆದಿತ್ಯ ಸೆಹಗಲ್ ಎಂಬುವವರು ಸಲ್ಲಿಸಿದ್ದ ಈ ಅರ್ಜಿಯ ಪರವಾಗಿ ವಕೀಲರಾದ ವಿಕಾಸ್ ಗುಪ್ತಾ ಮತ್ತು ಸೋಹಿಲ್ ಶರ್ಮಾ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಆ್ಯಪ್ ಆಧಾರಿತ ಕ್ಯಾಬ್‌ಗಳು ಓಡಾಡುತ್ತಿವೆ. ಆದರೆ, ರಾತ್ರಿ 8 ಅಥವಾ 9 ಗಂಟೆಯ ನಂತರ ಚಾಲಕರು ಮದ್ಯಪಾನ ಮಾಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ಸೂಕ್ತ ತಪಾಸಣೆ ನಡೆಯುತ್ತಿಲ್ಲ. ಅದೇ ರೀತಿ, ವಿಮಾನ ನಿಲ್ದಾಣ ಹಾಗೂ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುವ ಚಾಲಕರ ಬಗ್ಗೆಯೂ ಯಾವುದೇ ಪರಿಶೀಲನೆ ಇಲ್ಲ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

ಅರ್ಜಿಯಲ್ಲಿ ಮಹಿಳಾ ಸುರಕ್ಷತೆಗಾಗಿ ಇಟ್ಟಿರುವ ಪ್ರಮುಖ ಬೇಡಿಕೆಗಳು

ಮಹಿಳೆಯರ ಸುರಕ್ಷತೆಗಾಗಿ ಹಾಲಿ ಇರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಬೇಕು ಎಂದು ಕೋರಿ ಅರ್ಜಿದಾರರು ಕೋರ್ಟ್ ಮುಂದೆ ಹಲವು ಪ್ರಮುಖ ಪ್ರಸ್ತಾಪಗಳನ್ನು ಇಟ್ಟಿದ್ದಾರೆ.

ಆ್ಯಪ್‌ನಲ್ಲಿ ತೋರಿಸುವ ಚಾಲಕ ಮತ್ತು ವಾಹನದ ವಿವರಗಳು ನಿಜವಾಗಿ ಬಂದ ವಾಹನಕ್ಕೆ ಮ್ಯಾಚ್ ಆಗದಿದ್ದರೆ, ಪ್ರಯಾಣಿಕರು ಯಾವುದೇ ದಂಡವಿಲ್ಲದೆ ರೈಡ್ ರದ್ದುಗೊಳಿಸಲು ಅವಕಾಶ ನೀಡಬೇಕು.

ತುರ್ತು ಸಂದರ್ಭದಲ್ಲಿ ‘SOS’ ಅಲರ್ಟ್ ಎದುರಿಸಲು 24 ಗಂಟೆಯೂ ಕೆಲಸ ಮಾಡುವ ಕಂಟ್ರೋಲ್ ರೂಂ ಸ್ಥಾಪಿಸಬೇಕು. ಆ ಮೂಲಕ ಚಾಲಕನ ವಿವರ ಮತ್ತು ಲೊಕೇಶನ್ ಅನ್ನು ತಕ್ಷಣ ಪೊಲೀಸರಿಗೆ ತಲುಪಿಸಬೇಕು.

ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಆದ್ಯತೆಯ ಮೇರೆಗೆ ಮಹಿಳಾ ಚಾಲಕರನ್ನೇ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಬೇಕು.

ಕ್ಯಾಬ್ ನಿಗದಿತ ಮಾರ್ಗವನ್ನು ಬಿಟ್ಟು ಬೇರೆ ಕಡೆ ಚಲಿಸಿದರೆ ತಕ್ಷಣವೇ ಸಂಸ್ಥೆಯ ಕಂಟ್ರೋಲ್ ರೂಂಗೆ ಅಲರ್ಟ್ ಹೋಗುವ ತಂತ್ರಜ್ಞಾನ ಇರಬೇಕು.

ಚಾಲಕರ ಅನುಚಿತ ವರ್ತನೆ, ಕಿರುಕುಳ ಅಥವಾ ದೌರ್ಜನ್ಯದಂತಹ ದೂರುಗಳು ಬಂದರೆ ನಿಗದಿತ ಸಮಯದೊಳಗೆ ಕಠಿಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು.

ದೆಹಲಿಯಲ್ಲಿ ಓಡಾಡುವ ಎಲ್ಲಾ ಆ್ಯಪ್ ಆಧಾರಿತ ಸಂಸ್ಥೆಗಳಿಗೆ ಒಂದೇ ರೀತಿಯ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸುವಂತೆ ಮತ್ತು ಚಾಲಕರಿಗೆ ಸೂಕ್ತ ತರಬೇತಿ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Must Read