March 31, 2026
Tuesday, March 31, 2026
spot_img

ಬೆಳಗಾವಿ ಹಾಲು ಉತ್ಪಾದಕರ ಸಂಘಕ್ಕೆ ಬರೋಬ್ಬರಿ 2.59 ಕೋಟಿ ಲಾಭ: ಬಾಲಚಂದ್ರ ಜಾರಕಿಹೊಳಿ

ಹೊಸದಿಗಂತ ವರದಿ, ಬೆಳಗಾವಿ :

ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ (ಕೆಎಂಎಫ್) 2025-26 ಆರ್ಥಿಕ ವರ್ಷದಲ್ಲಿ ₹12 ಕೋಟಿ 59 ಲಕ್ಷ ನಿಕರಿ ಲಾಭ ಗಳಿಸಿದ್ದು, ₹510 ಕೋಟಿ ಟರ್ನೋವರ್ ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷರು ಹಾಗೂ ಶಾಸಕರಾದ ಭಾಲಚಂದ್ರ ಜಾರಕಿಹೋಳಿ ಹೇಳಿದರು.

ಮಂಗಳವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಸಂಘದ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 100 ಹೊಸ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಒಟ್ಟು ಕಾರ್ಯನಿರ್ವಹಣೆಯಲ್ಲಿರುವ ಸಂಘಗಳ ಸಂಖ್ಯೆ 685ಕ್ಕೆ ಏರಿಕೆಯಾಗಿದೆ ಎಂದರು.

ಹಾಲು ಸಂಗ್ರಹಣೆಯಲ್ಲಿಯೂ ಗಮನಾರ್ಹ ಪ್ರಗತಿ ಕಂಡುಬಂದಿದ್ದು, ಪ್ರತಿದಿನ ಸರಾಸರಿ 2.50 ಲಕ್ಷ ಕಿಲೋ ಹಾಲು ಸಂಗ್ರಹಿಸಲಾಗುತ್ತಿದೆ. ವರ್ಷಪೂರ್ತಿ ಒಟ್ಟು 8.20 ಕೋಟಿ ಕಿಲೋ ಹಾಲು ಸಂಗ್ರಹವಾಗಿದ್ದು, ಇದರಲ್ಲಿ ಹಸುವಿನ ಹಾಲಿನ ಪ್ರಮಾಣವೇ ಹೆಚ್ಚು ಇದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ₹32 ಕೋಟಿ ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ. ಇನ್ನೂ ಸುಮಾರು ₹7.50 ಕೋಟಿ ಬಾಕಿ ಉಳಿದಿದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಸಂಘವು ಹಾಲು ಸಂಗ್ರಹಣೆಯೊಂದಿಗೆ ತುಪ್ಪ, ಪನೀರ್ ಮತ್ತು ಪೇಡಾ ಉತ್ಪಾದನೆಯಲ್ಲಿ ಸಹ ಗಮನಾರ್ಹ ಬೆಳವಣಿಗೆ ಕಂಡಿದೆ. ಮಾರುಕಟ್ಟೆ ವಿಸ್ತರಣೆಗೆ ಬೆಳಗಾವಿ ಸೇರಿದಂತೆ ಗೋವಾ ಮತ್ತು ಪುಣೆ ನಗರಗಳಲ್ಲಿ ಒಟ್ಟು 55 ಫ್ರಾಂಚೈಸಿಗಳನ್ನು ಆರಂಭಿಸಲಾಗಿದೆ.

ವಿಶೇಷವಾಗಿ ಆಂಧ್ರ ಪ್ರದೇಶದ ‘ಅಕ್ಷರ ದಾಸೋಹ’ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ದಿನಕ್ಕೆ 25 ಸಾವಿರ ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದೆ ಎಂಬುದು ಸಂಘದ ಮತ್ತೊಂದು ಸಾಧನೆ ಎಂದು ಜಾರಕಿಹೋಳಿ ತಿಳಿಸಿದ್ದಾರೆ.

ಆರ್ಥಿಕ ವ್ಯವಹಾರಗಳ ಕುರಿತು ಮಾಹಿತಿ ನೀಡಿದ ಅವರು, ಸಂಘವು ರೈತರಿಗೆ ₹331 ಕೋಟಿ ಪಾವತಿಸಿದೆ. ಜೊತೆಗೆ ಲಾಭದ ಹಂಚಿಕೆಯಾಗಿ ಮೇವು ಕಟರ್, ರಬ್ಬರ್ ಮ್ಯಾಟ್ ಮತ್ತು ಹಾಲು ಹೀರುವ ಯಂತ್ರಗಳಿಗೆ ಸುಮಾರು ₹7 ಕೋಟಿ ಸಹಾಯ ನೀಡಲಾಗಿದೆ.

ಸಂಘದ ಈ ಪ್ರಗತಿ ರೈತರ ಹಿತಾಸಕ್ತಿಗೆ ಸಮರ್ಪಿತವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸುವತ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭಾಲಚಂದ್ರ ಜಾರಕಿಹೋಳಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !