October 3, 2026
Saturday, October 3, 2026
spot_img

ಬರ ಪರಿಶೀಲನೆಗೆ ಕೇಂದ್ರದ ತಂಡ ಸಜ್ಜು: 12 ಜಿಲ್ಲೆಗಳಲ್ಲಿ ಅಕ್ಟೋಬರ್ 6ರವರೆಗೆ ಸಮೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಅಧಿಕಾರಿಗಳನ್ನು ಒಳಗೊಂಡ ಅಂತರ್‌ ಸಚಿವಾಲಯ ಕೇಂದ್ರ ತಂಡ (IMCT) ರಾಜ್ಯಕ್ಕೆ ಭೇಟಿ ನೀಡಿದೆ. ಅಕ್ಟೋಬರ್ 6ರವರೆಗೆ ತಂಡದ ಅಧಿಕಾರಿಗಳು ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಮೂರೂ ಗುಂಪುಗಳಾಗಿ ವಿಂಗಡಣೆ

ಕೇಂದ್ರ ತಂಡವನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ತಂಡವು ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಮಳೆ ಕೊರತೆ, ಬೆಳೆ ನಷ್ಟ, ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ ಹಾಗೂ ರೈತರ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಲಿದೆ. ಅಧಿಕಾರಿಗಳು ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ತಂಡ-1 ರಲ್ಲಿ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ತಂಡದಲ್ಲಿ ಉಪ ನಿರ್ದೇಶಕ ಚೇತ್ ರಾಮ್ ಮೀನಾ, ವಿಶೇಷ ಅಧಿಕಾರಿ ಕರ್ನಲ್ ಅಮರೀಂದರ್ ಸಿಂಗ್ ಹಾಗೂ ನಿರ್ದೇಶಕ ಡಾ. ಜೆ. ಹರ್ಷ ಸದಸ್ಯರಾಗಿದ್ದಾರೆ. ಈ ತಂಡ ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ.

ತಂಡ-2 ರಲ್ಲಿ ಸಹಾಯಕ ಆಯುಕ್ತ ಡಾ. ಸುಧಾಮ್ ಬಾಗ್ ನೇತೃತ್ವದಲ್ಲಿದ್ದು, ಸಹಾಯಕ ಸಲಹೆಗಾರ ಆಶಿಶ್ ಪಾಂಡೆ, ಅಂಡರ್ ಸೆಕ್ರೆಟರಿ ಪ್ರದೀಪ್ ಕುಮಾರ್ ಹಾಗೂ ಉಪ ನಿರ್ದೇಶಕ ಕರಣ್ ಚೌಧರಿ ಸದಸ್ಯರಾಗಿದ್ದಾರೆ. ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ತಂಡ ಭೇಟಿ ನೀಡಲಿದೆ.

ತಂಡ-3 ರಲ್ಲಿ ನಿರ್ದೇಶಕ ಡಾ. ಮಾನ್ ಸಿಂಗ್ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಅಂಡರ್ ಸೆಕ್ರೆಟರಿಗಳಾದ ಪಾರ್ಥ ಪಾಲ್ ಮತ್ತು ರಾಕೇಶ್ ಕುಮಾರ್ ಸದಸ್ಯರಾಗಿದ್ದಾರೆ. ಯಾದಗಿರಿ, ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಬೆಳೆ ಹಾನಿ ಮತ್ತು ಬರದ ತೀವ್ರತೆಯನ್ನು ತಂಡ ಪರಿಶೀಲಿಸಲಿದೆ.

ಇದನ್ನೂ ಓದಿ:

ಸ್ಥಳ ಪರಿಶೀಲನೆ ವೇಳೆ ಬೆಳೆ ಹಾನಿಯ ಪ್ರಮಾಣ, ರೈತರ ಸಂಕಷ್ಟ, ನೀರಿನ ಲಭ್ಯತೆ ಹಾಗೂ ಬರದಿಂದ ಕೃಷಿ ಚಟುವಟಿಕೆಗಳ ಮೇಲಾಗಿರುವ ಪರಿಣಾಮಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಜಿಲ್ಲಾಡಳಿತದಿಂದಲೂ ಸಂಬಂಧಪಟ್ಟ ದಾಖಲೆಗಳು ಮತ್ತು ಅಂಕಿಅಂಶಗಳನ್ನು ಪಡೆಯಲಾಗುತ್ತದೆ.

ಸಮೀಕ್ಷೆ ಪೂರ್ಣಗೊಂಡ ಬಳಿಕ ಕೇಂದ್ರ ತಂಡ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಈ ವರದಿಯ ಆಧಾರದ ಮೇಲೆ ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಕೇಂದ್ರದ ನೆರವು ಕುರಿತು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಸ್ಥಳ ಪರಿಶೀಲನೆಯ ಮೂಲಕ ಬರದ ನೈಜ ಚಿತ್ರಣ ಕೇಂದ್ರದ ಗಮನಕ್ಕೆ ಬರಲಿದ್ದು, ರೈತರ ನಷ್ಟ ಹಾಗೂ ಅಗತ್ಯ ನೆರವಿನ ಕುರಿತು ಮುಂದಿನ ನಿರ್ಧಾರಗಳಿಗೆ ಈ ವರದಿ ಪ್ರಮುಖ ಆಧಾರವಾಗುವ ನಿರೀಕ್ಷೆಯಿದೆ.

Must Read