ಹೊಸದಿಗಂತ ವರದಿ, ಕಲಬುರಗಿ
ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಬಿಸಿಲಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳ ಸರ್ಕಾರಿ ಕಚೇರಿ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವ ಈ ಆದೇಶದಂತೆ, ಎರಡು ತಿಂಗಳ ಕಾಲ ಸರ್ಕಾರಿ ಕಚೇರಿಗಳು ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ. ಈ ಕುರಿತು ಆದೇಶ ಹೊರಡಿಸಿದ್ದಾರೆ.
ಬದಲಾದ ಸಮಯದಲ್ಲೂ ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ಯಾವುದೇ ಅಡಚಣೆ ಇಲ್ಲದೆ ನಿರ್ವಹಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೇವೆಗಳನ್ನು ನಿರಂತರವಾಗಿ ಒದಗಿಸುವಂತೆ ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನೀಡುವ ನಿರ್ದೇಶನದಂತೆ, ಸಮಯದ ಮಿತಿಯಿಲ್ಲದೆ ಕಾರ್ಯ ನಿರ್ವಹಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.



