September 16, 2026
Wednesday, September 16, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ಉಷಃಪಾನ–ನಾಸಾಪಾನದಿಂದ ಆರೋಗ್ಯಯುತ ಜೀವನ: ರಾಘವೇಶ್ವರ ಶ್ರೀಗಳ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂರ್ಯೋದಯಕ್ಕೂ ಪೂರ್ವದಲ್ಲಿ ಪ್ರತಿದಿನವೂ ನಿಯಮಿತವಾಗಿ ನೀರನ್ನು ಸೇವಿಸುವ ‘ಉಷಃಪಾನ’ ಹಾಗೂ ‘ನಾಸಾಪಾನ’ ಪದ್ಧತಿಗಳನ್ನು ಅಳವಡಿಸಿಕೊಂಡರೆ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಬುಧವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಸೂರ್ಯೋದಯಕ್ಕೂ ಮುನ್ನ ನೀರು ಸೇವಿಸುವುದನ್ನು ಉಷಃಪಾನ ಎಂದು ಕರೆಯಲಾಗುತ್ತದೆ. ಆಯುರ್ವೇದ ಹಾಗೂ ಯೋಗಶಾಸ್ತ್ರದಲ್ಲೂ ಈ ಪದ್ಧತಿಯ ಉಲ್ಲೇಖವಿದ್ದು, ನಿಯಮಿತವಾಗಿ ಅನುಸರಿಸುವಂತೆ ತಿಳಿಸಲಾಗಿದೆ ಎಂದರು.

ಉಷಃಪಾನವನ್ನು ಚಿಕ್ಕ ವಯಸ್ಸಿನಿಂದಲೇ ಹಂತಹಂತವಾಗಿ ಅಭ್ಯಾಸ ಮಾಡಿಕೊಳ್ಳಬಹುದು. ನೀರನ್ನು ಶೇಖರಿಸುವಾಗ ಉತ್ತಮ ಪಾತ್ರೆ ಬಳಸುವ ಬಗ್ಗೆಯೂ ಗಮನಹರಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು. ನಾಸಾಪಾನವನ್ನು ನಿಧಾನವಾಗಿ ಅಭ್ಯಾಸ ಮಾಡಿಕೊಳ್ಳಬೇಕು. ಇದನ್ನು ಯೋಗಶಾಸ್ತ್ರದಲ್ಲಿ ಜಲನೇತಿ, ಜಲನಸ್ಯ ಮುಂತಾದ ಹೆಸರಿನಿಂದಲೂ ಉಲ್ಲೇಖಿಸಲಾಗಿದ್ದು, ಬುದ್ಧಿ ಚುರುಕು ಹಾಗೂ ಕಣ್ಣಿನ ದೃಷ್ಟಿಗೆ ಸಹಕಾರಿಯಾಗುತ್ತದೆ ಎಂದು ವಿವರಿಸಿದರು. ಆದರೆ ಈ ಕ್ರಿಯೆಗಳನ್ನು ಸೂಕ್ತ ವಿಧಾನ ಮತ್ತು ಎಚ್ಚರಿಕೆಯಿಂದಲೇ ಮಾಡಬೇಕು ಎಂದು ಸೂಚಿಸಿದರು.

ಮಿಂಚು, ಸಮುದ್ರದ ಆಳದಲ್ಲಿರುವ ವಡವಾಗ್ನಿ ಹಾಗೂ ಜಠರಾಗ್ನಿಗಳಿಗೆ ನೀರೇ ಇಂಧನವಾಗಿದ್ದು, ನೀರಿನಿಂದಲೇ ಈ ಮೂರು ಅಗ್ನಿಗಳುಗಳು ಪ್ರಜ್ವಲಿಸುತ್ತದೆ. ಹಾಗಾಗಿ ಉಷಃಪಾನದಿಂದ ಜಠರಾಗ್ನಿ ಮಂದವಾಗುವುದಿಲ್ಲ ಎಂದ ಶ್ರೀಗಳು, ಈ ಪ್ರವಚನ ಮಾಲಿಕೆಯಲ್ಲಿ ಉಲ್ಲೇಖಿಸಿರುವ ವಿಚಾರಗಳು ಕೇವಲ ಪುಸ್ತಕದ ಬದನೇ ಕಾಯಿಯಲ್ಲ. ಇಲ್ಲಿ ಉಲ್ಲೇಖಿಸುತ್ತಿರುವ ಹಲವು ವಿಚಾರಗಳು ನಾವು ಆಚರಿಸಿ ನೋಡಿರುವ ಅಂಶಗಳನ್ನೇ ಉಲ್ಲೇಖಿಸುತ್ತಿದ್ದು, ಸಮಾಜ ಇದನ್ನು ಅಳವಡಿಸಿಕೊಂಡು ಆರೋಗ್ಯಯುತವಾಗಬೇಕು ಎಂದು ಅಭಿಪ್ರಾಯಪಟ್ಟರು.

ಘನಪಾರಾಯಣ ಪ್ರಾರಂಭ:

ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆಯ ಘನಪಾರಾಯಣವು ವೇ.ಬ್ರ. ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳ ನೇತೃತ್ವದಲ್ಲಿ ನಾಡಿನ ಪ್ರಮುಖ ಹತ್ತು ಘನಪಾಠಿಗಳಿಂದ ಪ್ರಾರಂಭವಾಯಿತು. ಇಂದಿನಿಂದ ಸೆಪ್ಟೆಂಬರ್ 23ರ ವರೆಗೆ ಘನಪಾರಾಯಣ ನಡೆಯಲಿದ್ದು, ವಿಶಿಷ್ಟವಾದ ಕ್ರಮದಲ್ಲಿ ವೇದ ಮಂತ್ರಗಳನ್ನು ಉಚ್ಚರಿಸುವ ಪದ್ಧತಿ ಘನಪಾಠವಾಗಿದೆ. ವೇದ ಪಾರಾಯಣದಲ್ಲಿ ಒಟ್ಟು 8 ಪ್ರಕಾರದ ವಿಕೃತಿ ಪಾಠಗಳಿದ್ದು, ಅವುಗಳಲ್ಲಿ ಘನಪಾಠವು ಅತ್ಯಂತ ಶ್ರೇಷ್ಠ ಹಾಗೂ ಕಠಿಣವಾದದ್ದು ಎಂದು ಪರಿಗಣಿಸಲಾಗಿದೆ.

ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್, ವೇ.ಬ್ರ. ರವೀಶ್ ತಂತ್ರಿ, ಹಿರಿಯ ಸಾಹಿತಿ ಭುವನೇಶ್ವರೀ ಹೆಗಡೆ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು. ಶಿವರಾಮಚಂದ್ರ ಶಿವಾಲ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಾಜಾರಾಮ ಮರಿಗದ್ದೆ ದಂಪತಿ ದಿನಪ್ರಧಾನರಾಗಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !