April 2, 2026
Thursday, April 2, 2026
spot_img

ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳ ಮೇಲೆ ದಾಳಿ: ದೀದಿ ಸರಕಾರದ ವಿರುದ್ಧ ಸುಪ್ರೀಂ ಚಾಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿಗೊಂಡಿದ್ದ ನ್ಯಾಯಾಂಗ ಅಧಿಕಾರಿಗಳ ಮೇಲೆ ನಡೆದ ದಾಳಿಯನ್ನು ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು,ಬಂಗಾಳದಲ್ಲಿ ಈ ಬೆಳವಣಿಗೆ ಆಘಾತಕಾರಿಯಾಗಿದೆ. ರಾಜ್ಯದಲ್ಲಿ ಇಂತಹ ಅರಾಜಕತೆಯನ್ನು ಸಹಿಸುವುದಿಲ್ಲ . ಇದು ಕೇವಲ ಪ್ರತಿಭಟನೆಯಲ್ಲ, ಬದಲಿಗೆ ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ನಡೆಸಿದ ಪೂರ್ವಯೋಜಿತ ಪ್ರಯತ್ನ ಎಂದು ಆಕ್ರೋಶ ಹೊರಹಾಕಿದೆ .

ಅದರಲ್ಲೂ ಅಧಿಕಾರಿಗಳಿಗೆ ಕನಿಷ್ಠ ಪಕ್ಷ ಆಹಾರ ಅಥವಾ ನೀರು ನೀಡದೆ ಹಿಂಸಿಸಲಾಗಿತ್ತು. ಗುಂಪೊಂದು ಬಂದು ಬೆದರಿಕೆ ಹಾಕಿದ್ದನ್ನು ಕೋರ್ಟ್​ ಗಮನಿಸಿದ್ದು, ಈ ಹಿನ್ನೆಲೆ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕಮತ್ತು ಜಿಲ್ಲಾಧಿಕಾರಿಗಳಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿದೆ.

ಇದೇ ವೇಳೆ ಕೋರ್ಟ್, ಈ ದಾಳಿಯ ಕುರಿತು ಕೇಂದ್ರೀಯ ತನಿಖಾ ದಳ ಅಥವಾ ರಾಷ್ಟ್ರೀಯ ತನಿಖಾ ದಳದಂತಹ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಜೊತೆಗೆ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗಾಗಿ ತಕ್ಷಣವೇ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ನಿರ್ದೇಶನ ನೀಡಿದೆ.

ಎಸ್‌ಐಆರ್ ಪ್ರಕ್ರಿಯೆ ನಡೆಯುವ ಎಲ್ಲಾ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಇರಬೇಕು. ಯಾವುದೇ ನ್ಯಾಯಾಂಗ ಅಧಿಕಾರಿ ಅಥವಾ ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಕೇಳಿಬಂದರೆ ತಕ್ಷಣವೇ ಕ್ರಮ ಜರುಗಿಸಬೇಕು ಎಂದು ಸೂಚಿಸಿದ ಕೋರ್ಟ್, ಮುಂದಿನ ವಿಚಾರಣೆಗೆ ಖುದ್ದು ಕೋರ್ಟ್ ಗೆ ಹಾಜರಾಗುವಂತೆ ಜಿಲ್ಲಾಧಿಕಾರಿ, ಮುಖ್ಯ ಕಾರ್ಯದರ್ಶಿ, ಡಿಜಿಪಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಸೂಚಿಸಿತು.

ಬಂಗಾಳದ ಮಾಲ್ಡಾ ಜಿಲ್ಲೆಯ ಕಲಿಯಾಚಕ್ II ಬ್ಲಾಕ್ ಅಭಿವೃದ್ಧಿ ಕಚೇರಿ ಹೊರಗೆ ಬುಧವಾರ ಎಸ್​ಐಆರ್​​ ಪ್ರಕ್ರಿಯೆ ವಿರೋಧಿಸಿ ಬೃಹತ್ ಪ್ರತಿಭಟನೆ ಭುಗಿಲೆದ್ದಿತು. ಪ್ರತಿಭಟನಾಕಾರರು ಬಿಡಿಒ ಕಚೇರಿಗೆ ಮುತ್ತಿಗೆ ಹಾಕಿದ್ದು, ಅಧಿಕಾರಿಗಳನ್ನು ಹೊರಬರದಂತೆ ತಡೆದು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !