ರಾಜ್ಯದ ಗಮನ ಸೆಳೆದಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ಸಂಪೂರ್ಣ ಚಿತ್ರಣ ಇಲ್ಲಿದೆ…
2008ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಅಸ್ತಿತ್ವಕ್ಕೆ ಬಂದ ದಾವಣಗೆರೆ ಕ್ಷೇತ್ರ, ರಾಜಕೀಯವಾಗಿ ದಶಕಗಳ ಇತಿಹಾಸವಿದೆ. ಈ ಕ್ಷೇತ್ರದಲ್ಲಿ, ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರೇ ಗೆಲುವು ಸಾಧಿಸಿದ್ದಾರೆ. ಇದೀಗ ಅವರ ನಿಧನದಿಂದ ತೆರವಾಗಿರುವ ಈ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಚುನಾವಣಾ ಕಣದ ಅಂಕಿ-ಅಂಶಗಳು
ಈ ಬಾರಿ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳಿದ್ದು, ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು, ಬಿಜೆಪಿಯಿಂದ ಶ್ರೀನಿವಾಸ ದಾಸಕರಿಯಪ್ಪ ಹಾಗೂ ಎಎಪಿಯಿಂದ ಶಿವಕುಮಾರ್ ಪ್ರಮುಖರಾಗಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 31 ಸಾವಿರದ 683 ಮತದಾರರಿದ್ದು, ಈ ಪೈಕಿ 1 ಲಕ್ಷದ 17 ಸಾವಿರದ 986 ಮಹಿಳೆಯರು ಹಾಗೂ 1 ಲಕ್ಷದ 13 ಸಾವಿರದ 654 ಪುರುಷ ಮತದಾರರಿದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರೇ 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವುದು ಕ್ಷೇತ್ರದ ವಿಶೇಷ.
ಇವರೊಂದಿಗೆ 43 ತೃತೀಯ ಲಿಂಗಿಗಳು, 2,774 ಯುವ ಮತದಾರರು ಹಾಗೂ 2,518 ವಿಶೇಷ ಚೇತನ ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟ 2,066 ಹಿರಿಯ ನಾಗರಿಕರಿಗೆ ಮನೆಯಿಂದಲೇ ಅಂಚೆ ಮತದಾನ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಮತದಾನದ ಸಿದ್ಧತೆ ಮತ್ತು ಭದ್ರತೆ
ಕ್ಷೇತ್ರದ ಒಟ್ಟು 284 ಮತಗಟ್ಟೆಗಳ ಪೈಕಿ 234 ನಗರ ವ್ಯಾಪ್ತಿಯಲ್ಲಿದ್ದರೆ, 50 ಗ್ರಾಮೀಣ ಭಾಗದಲ್ಲಿವೆ. ಪಾರದರ್ಶಕ ಮತದಾನಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಮೂರು ಹಂತದ ಬಿಗಿ ಭದ್ರತಾ ಯೋಜನೆಯನ್ನು ರೂಪಿಸಿದೆ. ಚುನಾವಣಾ ಅಕ್ರಮ ತಡೆಯಲು ಫ್ಲೈಯಿಂಗ್ ಸ್ಕ್ವಾಡ್ ಮತ್ತು ವಿಡಿಯೋ ಸರ್ವೆಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದ್ದು, 12 ಚೆಕ್ ಪೋಸ್ಟ್‌ಗಳ ಮೂಲಕ ಹದ್ದಿನ ಕಣ್ಣಿಡಲಾಗಿದೆ.
ವಿಶೇಷ ಮಾದರಿ ಮತಗಟ್ಟೆಗಳು
ಮತದಾನದ ಪ್ರಮಾಣ ಹೆಚ್ಚಿಸಲು ಹತ್ತು ವಿಶೇಷ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಮಹಿಳೆಯರಿಗಾಗಿ 5 ‘ಸಖಿ’ ಮತಗಟ್ಟೆಗಳು, ಯುವ ಮತದಾರರನ್ನು ಸೆಳೆಯಲು 2 ‘ಯುವ ಮತಗಟ್ಟೆ’ಗಳು, ಇಲ್ಲಿ 18-21 ವರ್ಷದ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಾರೆ. ಹಾಗೂ ವಿಶೇಷ ಚೇತನರಿಗಾಗಿ ಒಂದು ಪ್ರತ್ಯೇಕ ಮತಗಟ್ಟೆಯನ್ನು ಮೀಸಲಿಡಲಾಗಿದೆ. ಈ ವಿಶೇಷ ಮತಗಟ್ಟೆಗಳ ಸಂಪೂರ್ಣ ನಿರ್ವಹಣೆಯನ್ನು ವಿಶೇಷ ಚೇತನ ಸಿಬ್ಬಂದಿಯೇ ಮಾಡುವುದು ಈ ಚುನಾವಣೆಯ ಮತ್ತೊಂದು ವಿಶೇಷತೆಯಾಗಿದೆ.



