September 17, 2026
Thursday, September 17, 2026
spot_img

ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ: ಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ವರದಿ ಮಡಿಕೇರಿ:

ರಾಜ್ಯದ ಜಲಾಶಯಗಳು ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕು. ಎರಡೂ ಬಹಳ ಮುಖ್ಯ. ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಯುವುದು ನನ್ನ ಕರ್ತವ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕುಡಿಯುವ ನೀರು ಹಾಗೂ ಕೃಷಿಗೆ ಜಲಾಶಯಗಳಲ್ಲಿನ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಧಾರ ಕೈಗೊಳ್ಳಬೇಕಿದೆ. ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಬೇಕು, ರೈತರಿಗೆ ಅನ್ನ ಸಿಗಬೇಕೆಂಬುದೇ ನಮ್ಮ ಆಶಯವಾಗಿದೆ ಎಂದು ತಿಳಿದರು.

ನಮ್ಮ ರಾಜ್ಯದ ಒಳಗೆ ಯಾವುದೇ ಅಣೆಕಟ್ಟು ಕಟ್ಟಲು ಅಭ್ಯಂತರವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಕೇಂದ್ರ ಸರ್ಕಾರ ಕೂಡ ತಮಿಳುನಾಡಿನ ಸಂಸದರಿಗೆ ಉತ್ತರ ನೀಡುವಾಗ ಇದನ್ನು ಸ್ಪಷ್ಟಪಡಿಸಿದೆ. ಮೇಕೆದಾಟು ನಿರ್ಮಾಣದಿಂದ ತಮಿಳುನಾಡಿಗೆ ನಿಗದಿಯಾಗಿರುವ 177.25 ಟಿಎಂಸಿ ನೀರಿನ ಹಂಚಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಗೆ ಪ್ರತ್ಯೇಕ ನಿಯಮಗಳಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಈ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ. ನಮ್ಮ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾದರೆ ಅನಗತ್ಯ ಸಂಕಷ್ಟ ಎದುರಾಗಬಹುದು. ಆ ಪರಿಸ್ಥಿತಿ ಬರಬಾರದು. ನಾವು ಕಾನೂನು ಪಾಲಿಸದಿದ್ದರೆ ಅಣೆಕಟ್ಟು ನಿಯಂತ್ರಣವನ್ನು ಕೇಂದ್ರ ಸರ್ಕಾರಕ್ಕೆ ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ನುಡಿದರು.

ಇದನ್ನೂ ಓದಿ:

ಕಾವೇರಿ ನದಿ ಹಾಗೂ ಕನ್ನಂಬಾಡಿ ಕಟ್ಟೆ ಅನ್ನದ ತಟ್ಟೆ. ನಮ್ಮ ರೈತರು ಬೆಳೆ ತೆಗೆಯಲಿ, ಅವರು ಉಳಿಯಲಿ ಎಂದು ತಾಯಿ ಕಾವೇರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಮೇಕೆದಾಟು ಹೋರಾಟ “ನಮ್ಮ ನೀರು, ನಮ್ಮ ಹಕ್ಕು” ಸಂದರ್ಭದಲ್ಲಿ ಕಾವೇರಿ ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದೆ. ಮೂರು ವರ್ಷಕ್ಕೊಮ್ಮೆ ಇಂತಹ ನೀರಿನ ಸಮಸ್ಯೆ ಎದುರಾಗುವುದು ಪ್ರಕೃತಿಯ ನಿಯಮ ಎಂದೂ ಡಿಕೆಶಿ ತಿಳಿಸಿದರು.

ಮಳೆಗಾಗಿ ಕಿಗ್ಗಾಲಿಯಲ್ಲೂ ಪ್ರಾರ್ಥನೆ

ಮಳೆಗಾಗಿ ರಾಜ್ಯದ ಜನರ ಪ್ರಾರ್ಥನೆಯೂ ಅಗತ್ಯ. ಮಳೆಗಾಗಿಯೇ ಪ್ರಾರ್ಥನೆ ಸಲ್ಲಿಸಲು ಇರುವ ಕಿಗ್ಗಾಲಿಯಲ್ಲಿಯೂ ಮಳೆಗಾಗಿ ಪ್ರಾರ್ಥನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ತಿಳಿಸಲಾಗುವುದು. ರಾಜ್ಯದ ಜನತೆ, ಪಕ್ಷದ ನಾಯಕರು ಹಾಗೂ ಗುರುಗಳ ಆಶೀರ್ವಾದದಿಂದ ಕಳೆದ 45 ವರ್ಷಗಳಿಂದ ನಾನು ನಡೆಸಿದ ಹೋರಾಟಕ್ಕೆ, ಪ್ರಾರ್ಥನೆಗೆ ಫಲ ಸಿಕ್ಕಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !