ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಕೆಲ ಆಪ್ತ ಸ್ನೇಹಿತರು ಮತ್ತು ಹೊಂಬಾಳೆ ಫಿಲ್ಮ್ಸ್ ಖಾತೆಗಳನ್ನು ಅನ್‌ಫಾಲೋ ಮಾಡಿದ ವಿಚಾರ ಸಿನಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
‘ಹೊಸ ಅಧ್ಯಾಯ’ ಎಂಬ ಪೋಸ್ಟ್ ಹಂಚಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದ್ದರಿಂದ ಹಲವು ಊಹಾಪೋಹಗಳು ಹರಿದಾಡಿದ್ದವು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ ನೀಡಿ ಕುತೂಹಲ ಹೆಚ್ಚಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಶೆಟ್ಟಿ, ಯುಗಾದಿ ಹಬ್ಬದ ದಿನ ತಾವು ಸ್ವತಃ ರಿಷಬ್ ಶೆಟ್ಟಿಗೆ ಕರೆ ಮಾಡಿದ್ದಾಗಿ ತಿಳಿಸಿದ್ದಾರೆ. ಆ ವೇಳೆ ಅವರು ಶೂಟಿಂಗ್‌ನಲ್ಲಿದ್ದು, ಅರಣ್ಯ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯೂ ಇದ್ದುದಾಗಿ ಹೇಳಿದ್ದಾರೆ. “ಹೊಸ ಅಧ್ಯಾಯ” ಪೋಸ್ಟ್ ಕುರಿತು ಪ್ರಶ್ನಿಸಿದಾಗ, ರಿಷಬ್ ತಮ್ಮ ಮುಂದಿನ ಕೆಲಸಗಳ ಬಗ್ಗೆ ಆಲೋಚನೆ ನಡೆಸುತ್ತಿರುವ ಸೂಚನೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಪ್ರಮೋದ್ ಅವರ ಪ್ರಕಾರ, ರಿಷಬ್ ಶೆಟ್ಟಿ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆರಂಭದಲ್ಲಿ ನಿರ್ಮಾಣ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಇಚ್ಛೆ ಇರಲಿಲ್ಲವಾದರೂ, ಈಗ ಸಿನಿಮಾ ನಿರ್ಮಾಣದ ದಿಕ್ಕಿನಲ್ಲಿ ಮುಂದುವರಿಯುವ ಮನಸ್ಸು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಹೊಂಬಾಳೆ ಫಿಲ್ಮ್ಸ್ ಖಾತೆಯನ್ನು ಅನ್‌ಫಾಲೋ ಮಾಡಿದ ಕಾರಣದ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ. ಈ ಬಗ್ಗೆ ಸಮಯ ಬಂದಾಗ ರಿಷಬ್ ಸ್ವತಃ ಮಾತನಾಡಬಹುದು ಎಂದು ಅವರು ಹೇಳಿದ್ದಾರೆ. ಸದ್ಯ ಈ ಬೆಳವಣಿಗೆ ರಿಷಬ್ ಶೆಟ್ಟಿ ಮುಂದಿನ ಸಿನಿ ಅಧ್ಯಾಯದ ಸುಳಿವು ಎನ್ನಲಾಗುತ್ತಿದೆ.



