April 3, 2026
Friday, April 3, 2026
spot_img

ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರೋದು ಯಾವಾಗ?: ಸಿಎಂ ಎದುರು ಬೃಹತ್ ಪ್ರತಿಭಟನೆ ನಡೆಸಲು ಸಂತ್ರಸ್ತರ ಸಮಿತಿ ನಿರ್ಧಾರ

ಹೊಸದಿಗಂತ ವರದಿ ​ಬೀದರ್:

ಕಾರಂಜಾ ಸಂತ್ರಸ್ತರಿಗೆ ಮಾನವೀಯತೆ ಹಾಗೂ ವೈಜ್ಞಾನಿಕ ಮಾದರಿಯ ಆಧಾರದ ಮೇಲೆ ಸಮರ್ಪಕ ಪರಿಹಾರ ನೀಡಬೇಕೆಂದು ಕಳೆದ ಐದು ದಶಕಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದರೂ, ವಿವಿಧ ಆಡಳಿತಾತ್ಮಕ ಕಾರಣಗಳಿಂದ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಏಪ್ರಿಲ್ 11ರಂದು ಬೀದರನಲ್ಲಿ ಸಿಎಂ ಸಿದ್ದರಾಮಯ್ಯ ಎದುರು ಬೃಹತ್ ಪ್ರತಿಭಟನೆ ನಡೆಸಲು ಕಾರಂಜಾ ಮುಳುಗಡೆ ಪ್ರದೇಶಗಳ 28 ಗ್ರಾಮಗಳ ಸಂತ್ರಸ್ತರ ಸಮಿತಿ ನಿರ್ಧರಿಸಿದೆ.

ನಗರದ ಅಂಬೇಡ್ಕರ್ ವೃತ್ತ ಸಮೀಪದ ಪ್ರವಾಸಿ ಮಂದಿರದಲ್ಲಿ ಕಾರಂಜಾ ಸಂತ್ರಸ್ತರ ಹೋರಾಟಗಾರ ಲಕ್ಷ್ಮಣ ದಸ್ತಿ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಿಎಂ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ಏಪ್ರಿಲ್ 11ರಂದು ನಗರಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಕಾರಂಜಾ ಸಂತ್ರಸ್ತರ ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಕುರಿತು ಅಧಿಕೃತವಾಗಿ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮೂಲಕ ಒತ್ತಾಯಿಸಲಾಗುವುದು. ಅಂದು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಿದರು.

ಕಾರಂಜಾ ನೀರಾವರಿ ಯೋಜನೆಗಾಗಿ ನಮ್ಮ ಹಕ್ಕಿನ ಜಮೀನು ನೀಡಿ ಮನೆ-ಮಠ ಕಳೆದುಕೊಂಡ 28 ಹಳ್ಳಿಗಳ ರೈತ ಸಂತ್ರಸ್ತರ ಕುಟುಂಬದ ಎಲ್ಲಾ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಅಂದಿನ ಪ್ರತಿಭಟನೆಯಲ್ಲಿ ತಪ್ಪದೇ ಭಾಗವಹಿಸಲಿದ್ದೇವೆ. ಕಾರಂಜಾ ಯೋಜನೆ ಬೀದರ್ ಜಿಲ್ಲೆಯ ಸಾರ್ವಜನಿಕರ ಹಾಗೂ ರೈತರ ಪಾಲಿನ ಜೀವನಾಡಿಯಾಗಿದೆ, ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಕುಡಿಯುವ ನೀರು ದೊರೆಯುತ್ತಿದೆ. ಹಾಗೂ ನೂರಾರು ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಲಭಿಸಿದೆ. ಆದ್ದರಿಂದ ಈ ಹೋರಾಟವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲು ಸಮಿತಿ ವತಿಯಿಂದ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಜಿಲ್ಲೆಯಲ್ಲಿ ಎಂದೂ ಆಗಿರದ ಬೃಹತ್ ಮಟ್ಟದ ಹೋರಾಟದ ಯಶಸ್ಸಿಗಾಗಿ ಪ್ರತಿಯೊಂದು ಗ್ರಾಮವಾರು ಕ್ರಿಯಾ ಸಮಿತಿಗಳನ್ನು ರಚಿಸಿ ಸಿದ್ಧತೆ ನಡೆಸಲು ನಿರ್ಧರಿಸಲಾಗಿದ್ದು. ಈ ಹೋರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಪಕ್ಷಭೇದ ಮರೆತು ಬೆಂಬಲ ನೀಡಬೇಕೆಂದು ಕಾರಂಜಾ ಸಂತ್ರಸ್ತರ ಹೋರಾಟ ಸಮಿತಿ ಮನವಿ ಮಾಡಿದೆ.

ಪ್ರತಿಭಟನಾ ರೂಪುರೇಷೆ ನಿರ್ಧರಿಸಲು ನಡೆದ ಸಭೆಯಲ್ಲಿ ಹೋರಾಟಗಾರರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಪದಾಧಿಕಾರಿಗಳಾದ ರಾಜಪ್ಪ ರೇಕುಳಗಿ, ವೀರೇಂದ್ರ ಭತಮರ್ಗೆ, ವಿನಯಕುಮಾರ ಮಾಳಗೆ, ರಾಜಪ್ಪ ಕೋಸಂ, ಮಾದಪ್ಪ ಕೌದೆ, ರೇವಣಪ್ಪ ರಂಜೋಳ, ರೋಹನ್ ಕುಮಾರ, ಸಂಗಾರೆಡ್ಡಿ ಔರಾದ, ಚಂದ್ರಶೇಖರ್ ಒಡ್ಡಿ, ಶಿವಕುಮಾರ್ ಬಗದಲ, ಲಕ್ಷ್ಮಣ ಭೂತಾಳೆ, ಸೂರ್ಯಕಾಂತ ಕುಲಕರ್ಣಿ, ಯೂಸುಫ್ ರೆಕುಳಗಿ, ಮಹಮ್ಮದ ಸೊಲಾಪೂರೆ, ಲಕ್ಷ್ಮೀ ಕೌದೆ, ಸಂಜಯ್ ಪಾಟೀಲ್ ಸೇರಿದಂತೆ ಅನೇಕ ಸಂತ್ರಸ್ತ ರೈತರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !