ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಡಾ. ಮನಮೋಹನ್ ಸಿಂಗ್ ನಗರ ವಿಶ್ವವಿದ್ಯಾಲಯದ 5ನೇ ವಾರ್ಷಿಕ ಘಟಿಕೋತ್ಸವವು ನಾಳೆ ನಡೆಯಲಿದೆ.
ನಗರದ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ.
ಡಿಆರ್ಡಿಒ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ ವಿಭಾಗದ ಮಹಾನಿರ್ದೇಶಕರಾದ ಡಾ. ಬಿನಯ್ ಕುಮಾರ್ ದಾಸ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಕೆಎಸ್ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಒಟ್ಟು ಆರು ಮಂದಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.



