September 16, 2026
Wednesday, September 16, 2026
spot_img

ಜೀವ ಉಳಿಸುವ ಔಷಧವೇ ನಕಲಿಯಾದರೆ ಬಿಡಲ್ಲ: ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದ ಯು.ಟಿ. ಖಾದರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೀವ ಉಳಿಸಬೇಕಾದ ಔಷಧಿಗಳೇ ನಕಲಿಯಾಗಿ ಮಾರುಕಟ್ಟೆಗೆ ಬಂದು ರೋಗಿಗಳ ಆರೋಗ್ಯಕ್ಕೆ ಇನ್ನಷ್ಟು ಅಪಾಯ ತರುತ್ತಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಕ್ರಿಮಿನಲ್ ಕ್ರಮ ಕೈಗೊಳ್ಳಬೇಕಿದೆ

ನಕಲಿ ಔಷಧ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕೇವಲ ಲೈಸೆನ್ಸ್ ರದ್ದುಪಡಿಸಿದರೆ ಅಥವಾ ದಂಡ ವಿಧಿಸಿದರೆ ಸಾಲದು, ಇದು ಮನುಷ್ಯನ ಜೀವಕ್ಕೆ ಅಪಾಯ ಉಂಟುಮಾಡುವ ಕೃತ್ಯವೆಂದು ಪರಿಗಣಿಸಿ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಖಾದರ್, ಬಿಡದಿ ಬಳಿ ಪತ್ತೆಯಾದ ನಕಲಿ ಔಷಧ ಪ್ರಕರಣವನ್ನು ‘ಎಚ್ಚರಿಕೆಯ ಕರೆಗಂಟೆ ಎಂದ ಅವರು, ನಕಲಿ ಔಷಧ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲು ಕೇಂದ್ರ ಸರ್ಕಾರಕ್ಕೆ ಕಾನೂನು ತಿದ್ದುಪಡಿ ಮಾಡುವಂತೆ ರಾಜ್ಯದಿಂದ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರಾಥಮಿಕ ತನಿಖೆಯಲ್ಲಿ ನಕಲಿ ಔಷಧಿಗಳನ್ನು ಬೇರೆ ರಾಜ್ಯಗಳಲ್ಲಿ ತಯಾರಿಸಿ ಕರ್ನಾಟಕಕ್ಕೆ ತಂದು, ನಂತರ ದೇಶದ ವಿವಿಧ ಭಾಗಗಳಿಗೆ ಪೂರೈಸಿರುವ ಸಾಧ್ಯತೆ ಬೆಳಕಿಗೆ ಬಂದಿದ್ದು, ಬಿಡದಿ ಬಳಿ ಸುಮಾರು 5 ಕೋಟಿ ರೂ ಮೌಲ್ಯದ ನಕಲಿ ಹಾಗೂ ಅವಧಿ ಮೀರಿದ ಔಷಧಿಗಳನ್ನು ವಶಪಡಿಸಿಕೊಂಡ ಪ್ರಕರಣದ ತನಿಖೆ ಇದೀಗ ಅಂತಾರಾಜ್ಯ ಜಾಲದತ್ತ ವಿಸ್ತರಿಸಿದೆ.

ಇದನ್ನೂ ಓದಿ:

SIT ತನಿಖೆಗೆ ವೇಗ

ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿದ ಬಳಿಕ ಪೊಲೀಸ್ ಅಧಿಕಾರಿಗಳು, ಔಷಧ ನಿಯಂತ್ರಣ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ ಎಂದರು. ಈಗಾಗಲೇ ವಶಪಡಿಸಿಕೊಂಡ ನಕಲಿ ಔಷಧಗಳ ಬ್ಯಾಚ್‌ಗಳನ್ನು ಆಸ್ಪತ್ರೆಗಳು ಮತ್ತು ಮೆಡಿಕಲ್‌ ಶಾಪ್‌ಗಳಿಂದ ಹಿಂಪಡೆಯಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಔಷಧ ಗುಣಮಟ್ಟಕ್ಕೆ ಹೈಟೆಕ್ ಪ್ರಯೋಗಾಲಯ

ಕಾರ್ಖಾನೆಗಳು, ಆಸ್ಪತ್ರೆಗಳು ಮತ್ತು ಔಷಧ ಮಳಿಗೆಗಳಿಂದ ಔಷಧಿಗಳ ಮಾದರಿಗಳನ್ನು ಸಂಗ್ರಹಿಸಿ ಯಾದೃಚ್ಛಿಕ ಗುಣಮಟ್ಟ ಪರೀಕ್ಷೆ ನಡೆಸಲು ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸುವ ಅಥವಾ ಈಗಿರುವ ಪ್ರಯೋಗಾಲಯದೊಂದಿಗೆ ಸಹಭಾಗಿತ್ವ ಮಾಡಿಕೊಳ್ಳುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !