ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಜಿಸಿಯ ಸಲಹೆ ಮೇರೆಗೆ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಎನ್ ಸಿಇಆರ್ ಟಿ ಅನ್ನು ವಿಶಿಷ್ಟ ವರ್ಗದ ಅಡಿಯಲ್ಲಿ ಡೀಮ್ ಟು ಬಿ ವಿಶ್ವವಿದ್ಯಾಲಯವೆಂದು ಘೋಷಿಸಿದೆ.
ಎನ್ ಸಿಇಆರ್ ಟಿಗೆ ಈ ವಿಶಿಷ್ಟ ಮಾನ್ಯತೆಯನ್ನು ನೀಡಿಲು ಯುಜಿಸಿ ಪೋರ್ಟಲ್ ನಲ್ಲಿ ಆನ್ ಲೈನ್ ಅರ್ಜಿಯನ್ನು ದಾಖಲಿಸಲಾಗಿದ್ದು, ತಜ್ಞರ ಸಮಿತಿಯ ಶಿಫಾರಸ್ಸನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ – ಯುಜಿಸಿ ಪರಿಗಣಿಸಿ ಅನುಮೋದಿಸಿದೆ ಎಂದು ಸಚಿವಾಲಯ ತಿಳಿಸಿದೆ.ಅಲ್ಲದೆ ಸಂಶೋಧನಾ ಚಟುವಟಿಕೆಗಳ, ವಿನೂತನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಅಗತ್ಯ ಕ್ರಮ ವಹಿಸುವಂತೆ ನಿರ್ದೇಶನ ನೀಡಿದೆ.
ಎನ್ ಸಿಇಆರ್ ಟಿ 1961 ರಲ್ಲಿ ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆಯಾಗಿದ್ದು, ಶಾಲಾ ಶಿಕ್ಷಣದಲ್ಲಿ ಗುಣಾತ್ಮಕ ಸುಧಾರಣೆಗಳಿಗಾಗಿ ನೀತಿ ನಿರೂಪಣೆ ಹಾಗೂ ನಿರ್ವಹಣೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆಗಳನ್ನು ನೀಡುತ್ತಿದೆ. ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಉತ್ತೇಜನ, ಸಂಘಟನೆ, ಪಠ್ಯ ಪುಸ್ತಕಗಳ ರಚನೆ ಸೇರಿದಂತೆ ಪೂರಕ ಚಟುವಟಿಕೆಗಳನ್ನು ಅದು ನಿರ್ವಹಿಸುತ್ತಿದೆ.



