April 6, 2026
Monday, April 6, 2026
spot_img

ತಂದೆಯ ‘ಬಾಯ್ತಪ್ಪಿಗೆ’ ಮಗನ ‘ಸಾರಿ’: ವಿಶ್ವಕಪ್ ನಾಯಕರಲ್ಲಿ ಕ್ಷಮೆಯಾಚಿಸಿದ ಸಿಕ್ಸರ್ ಕಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್ ಯುವರಾಜ್ ಸಿಂಗ್, ತಮ್ಮ ತಂದೆ ಯೋಗರಾಜ್ ಸಿಂಗ್ ಅವರು ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗಾಗಿ ಭಾರತದ ಮಾಜಿ ನಾಯಕರುಗಳಾದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಇತ್ತೀಚಿನ ಪಾಡ್‌ಕಾಸ್ಟ್‌ವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಯುವಿ, “ನನ್ನ ತಂದೆಯ ಮಾತುಗಳಿಂದ ನಿಮಗಾದ ನೋವಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಆ ಕಟು ಮಾತುಗಳು ನನ್ನದಲ್ಲ ಎಂಬುದು ನಿಮಗೂ ತಿಳಿದಿದೆ. ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮಹಾನ್ ನಾಯಕರುಗಳಾದ ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ,” ಎಂದು ಭಾವುಕರಾಗಿ ನುಡಿದಿದ್ದಾರೆ.

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಹಲವು ವರ್ಷಗಳಿಂದ ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಯುವರಾಜ್ ವೃತ್ತಿಜೀವನ ಅಂತ್ಯವಾಗಲು ಧೋನಿ ಕಾರಣ ಎಂದು ಆರೋಪಿಸಿದ್ದ ಯೋಗರಾಜ್, “ಧೋನಿ ಮಗನ ಬೆನ್ನಿಗೆ ಚೂರಿ ಹಾಕಿದ್ದಾರೆ” ಎಂಬ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, 1983ರ ವಿಶ್ವಕಪ್ ವೇಳೆ ಕಪಿಲ್ ದೇವ್ ಅವರು ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕಾಗಿ ಅವರ ಮೇಲೆ ದ್ವೇಷ ಸಾಧಿಸಿದ್ದರು.

ಈ ಎಲ್ಲಾ ಕಹಿ ಘಟನೆಗಳನ್ನು ಮರೆತು ಸಂಬಂಧವನ್ನು ಸುಧಾರಿಸಿಕೊಳ್ಳಲು ಮುಂದಾಗಿರುವ ಯುವರಾಜ್ ಸಿಂಗ್, ತಂದೆಯ ಹಠಮಾರಿ ಧೋರಣೆಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !