ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಆಟೋ ಚಾಲಕರು ಎದುರಿಸುತ್ತಿರುವ ಸಂಕಷ್ಟಗಳು ನಾವ್ಯಾರೂ ಬಯಸಿ ಬಂದಿದ್ದಲ್ಲ, ಬದಲಿಗೆ ಜಾಗತಿಕ ಯುದ್ಧದ ಸನ್ನಿವೇಶಗಳಿಂದ ಉದ್ಭವಿಸಿರುವ ಸಮಸ್ಯೆಗಳಾಗಿವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಹಿಟ್ನಾಳ್ ಟೋಲ್ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದ ಬಗ್ಗೆ ಹಲವು ಪ್ರಮುಖ ಅಂಶಗಳನ್ನು ಹಂಚಿಕೊಂಡರು.
ಯಾವುದೇ ಸರ್ಕಾರವಿದ್ದರೂ ಇಂತಹ ಕಠಿಣ ಸಮಯದಲ್ಲಿ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ರಾಜಧರ್ಮ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಅಲ್ಪಮಟ್ಟಿನ ಯಶಸ್ಸು ಕಾಣುತ್ತಿದೆ. ವಿಪಕ್ಷಗಳು ಕೇಂದ್ರವನ್ನು ಟೀಕಿಸುವುದು ಸರಿಯಲ್ಲ. ಒಂದು ವೇಳೆ ಕೇಂದ್ರದಲ್ಲಿ ಯುಪಿಎ ಸರ್ಕಾರವೇ ಇದ್ದಿದ್ದರೆ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದರು ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಆಟೋ ಎಲ್‌ಪಿಜಿ ಮತ್ತು ಸಿಲಿಂಡರ್ ಕೊರತೆ ಎದ್ದು ಕಾಣುತ್ತಿದೆ. ಇದರ ನಡುವೆಯೂ ರಾಜ್ಯ ಸರ್ಕಾರ ಆಟೋ ಚಾಲಕರ ಮೇಲೆ ತೆರಿಗೆ ವಿಧಿಸಿರುವುದು ಚಾಲಕರ ಬದುಕನ್ನು ಮತ್ತಷ್ಟು ಕಷ್ಟಕ್ಕೀಡು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಬದುಕು ಕಟ್ಟಿಕೊಳ್ಳಲು ಆಟೋ ಚಾಲಕರು ತಿಂಗಳಿಗೆ 15 ಸಾವಿರ ರೂಪಾಯಿ ನೆರವು ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರವು ‘ಆರನೇ ಗ್ಯಾರಂಟಿ’ ಎಂದು ಪರಿಗಣಿಸಿ ಜಾರಿಗೆ ತರಬೇಕು. ಆ ಮೂಲಕ ಆಟೋ ಚಾಲಕರಿಗೆ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.



