ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ-ರಾಜಕಾರಣಿ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮಯಂ (MNM) ಪಕ್ಷದಲ್ಲಿ ಇದೀಗ ಒಳಅಸಮಾಧಾನ ತೀವ್ರಗೊಂಡಿದೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸದಿರುವ ನಿರ್ಧಾರ ಘೋಷಣೆಯಾದ ಬಳಿಕ, ಅಭ್ಯರ್ಥಿ ಆಕಾಂಕ್ಷಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕೆಲ ವರ್ಷಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಹೊಸ ಪರ್ಯಾಯ ಶಕ್ತಿಯಾಗಿ ಪಕ್ಷವನ್ನು ಆರಂಭಿಸಿದ್ದ ಕಮಲ್ ಹಾಸನ್, ಆರಂಭದಲ್ಲಿ ಡಿಎಂಕೆಗೆ ಸವಾಲೊಡ್ಡುವ ನಾಯಕನಾಗಿ ಬಿಂಬಿತರಾಗಿದ್ದರು. ಆದರೆ ಇತ್ತೀಚೆಗೆ ಅವರು ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆ ಪ್ರವೇಶಿಸಿರುವುದು ಹಾಗೂ ಇದೀಗ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ಕಾರ್ಯಕರ್ತರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದ್ದ ಹಲವು ಆಕಾಂಕ್ಷಿಗಳು ಅರ್ಜಿ ಶುಲ್ಕವಾಗಿ ತಲಾ 50,000 ರೂ.ಗಳನ್ನು ಪಕ್ಷಕ್ಕೆ ಪಾವತಿಸಿದ್ದರು. ಪಕ್ಷ ಸ್ಪರ್ಧಿಸದೇ ಇರುವ ನಿರ್ಧಾರ ಹೊರಬಿದ್ದ ನಂತರ, ತಮ್ಮ ಹಣವನ್ನು ವಾಪಸ್ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಆದರೆ ಪಕ್ಷದ ಪದಾಧಿಕಾರಿಗಳು ಈ ಮೊತ್ತವನ್ನು ‘ಪಕ್ಷಕ್ಕೆ ನೀಡಿದ ದೇಣಿಗೆ’ ಎಂದು ಪರಿಗಣಿಸಲಾಗುತ್ತದೆ, ಹೀಗಾಗಿ ಮರುಪಾವತಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಹಾಗೂ ಚಿಹ್ನೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆ ಪಕ್ಷ ಚುನಾವಣೆಯಿಂದ ಹಿಂದೆ ಸರಿದಿದೆ ಎನ್ನಲಾಗಿದೆ. ಪಕ್ಷ ಸ್ಪರ್ಧಿಸದಿದ್ದರೂ ಡಿಎಂಕೆ ಅಭ್ಯರ್ಥಿಗಳಿಗೆ ಬೇಷರತ್ ಬೆಂಬಲ ನೀಡುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ. ಈ ನಿರ್ಧಾರದಿಂದ ಸ್ವಪಕ್ಷದಲ್ಲೇ ಆಕ್ರೋಶ ಭುಗಿಲೆದ್ದಿದ್ದು, ಮುಂದಿನ ದಿನಗಳಲ್ಲಿ ಎಂಎನ್ಎಂ ಒಳರಾಜಕೀಯ ಮತ್ತಷ್ಟು ಕಾವೇರುವ ಸಾಧ್ಯತೆ ಇದೆ.



