ಉತ್ತರ ಕರ್ನಾಟಕದ ಊಟದಲ್ಲಿ ಎಣ್ಣೆಗಾಯಿ ಅಂದ್ರೆ ವಿಶೇಷ ಸ್ಥಾನ. ಜೋಳದ ರೊಟ್ಟಿ, ಅನ್ನ ಅಥವಾ ಚಪಾತಿಯ ಜೊತೆಗೆ ಈ ಬದನೆಕಾಯಿ ಎಣ್ಣೆಗಾಯಿ ಸಿಕ್ಕಿದ್ರೆ ಊಟದ ರುಚಿಯೇ ಬೇರೆ. ಮಸಾಲೆಯ ಸುವಾಸನೆ, ಕಡಲೆಕಾಯಿ–ಎಳ್ಳಿನ ರುಚಿ ಮತ್ತು ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿದ ಬದನೆಕಾಯಿ ತಿಂದವರು ಖಂಡಿತಾ ರೆಸಿಪಿ ಕೇಳ್ತಾರೆ!
ಬೇಕಾಗುವ ಪದಾರ್ಥಗಳು
ಸಣ್ಣ ಬದನೆಕಾಯಿ – 8 ರಿಂದ 10
ಈರುಳ್ಳಿ – 2
ಕಡಲೆಕಾಯಿ – 4 ಟೇಬಲ್ ಸ್ಪೂನ್
ಎಳ್ಳು – 2 ಟೇಬಲ್ ಸ್ಪೂನ್
ಒಣ ಕೊಬ್ಬರಿ ತುರಿ – 3 ಟೇಬಲ್ ಸ್ಪೂನ್
ಬೆಳ್ಳುಳ್ಳಿ – 5 ಕಳಿ
ಕೆಂಪು ಮೆಣಸಿನ ಪುಡಿ – 2 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಹುಣಸೆಹಣ್ಣು ರಸ – 2 ಟೇಬಲ್ ಸ್ಪೂನ್
ಬೆಲ್ಲ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 5 ರಿಂದ 6 ಟೇಬಲ್ ಸ್ಪೂನ್
ಕರಿಬೇವು, ಸಾಸಿವೆ – ಒಗ್ಗರಣೆಗೆ
ಮಾಡುವ ವಿಧಾನ
ಮೊದಲು ಬದನೆಕಾಯಿಗಳನ್ನು ತೊಳೆದು, ಕೆಳಭಾಗ ಸೇರಿಕೊಂಡಂತೆಯೇ ನಾಲ್ಕು ಕಟ್ ಹಾಕಿ ಪಕ್ಕಕ್ಕೆ ಇಡಿ.
ಈಗ ಕಡಲೆಕಾಯಿ, ಎಳ್ಳು ಮತ್ತು ಕೊಬ್ಬರಿಯನ್ನು ಸ್ವಲ್ಪ ಹುರಿದು ತಣ್ಣಗಾದ ಮೇಲೆ ಬೆಳ್ಳುಳ್ಳಿ, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ, ಉಪ್ಪು, ಬೆಲ್ಲ ಹಾಗೂ ಹುಣಸೆ ರಸ ಸೇರಿಸಿ ಗಟ್ಟಿ ಮಸಾಲೆ ಪೇಸ್ಟ್ ಮಾಡಿಕೊಳ್ಳಿ.
ಈ ಮಸಾಲೆಯನ್ನು ಬದನೆಕಾಯಿಗಳ ಒಳಗೆ ಚೆನ್ನಾಗಿ ತುಂಬಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಹಾಕಿ, ಈರುಳ್ಳಿ ಸ್ವಲ್ಪ ಹುರಿಯಿರಿ. ನಂತರ ಮಸಾಲೆ ತುಂಬಿದ ಬದನೆಕಾಯಿಗಳನ್ನು ಹಾಕಿ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಮಧ್ಯೆ ಮಧ್ಯೆ ಎಣ್ಣೆ ಎರಚುತ್ತಾ ತಿರುಗಿಸಿ.
10–15 ನಿಮಿಷಗಳಲ್ಲಿ ಎಣ್ಣೆ ಮೇಲಕ್ಕೆ ಬಂದು ಬದನೆಕಾಯಿ ಮೃದುವಾದರೆ ರುಚಿಯಾದ ಉತ್ತರ ಕರ್ನಾಟಕ ಸ್ಟೈಲ್ ಎಣ್ಣೆಗಾಯಿ ರೆಡಿ!
ಬಿಸಿ ಜೋಳದ ರೊಟ್ಟಿಯ ಜೊತೆ ಸರ್ವ್ ಮಾಡಿದ್ರೆ ಸೂಪರ್ ರುಚಿ.



