ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆಯ ರುಚಿ ಹೆಚ್ಚಿಸುವ ಉಪ್ಪಿನ ಪ್ರಮಾಣವೇ ಮಿತಿ ಮೀರಿದರೆ ಆರೋಗ್ಯಕ್ಕೆ ಅಪಾಯವಾಗಬಹುದು ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಉಪ್ಪಿನ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿ ರೂಪಿಸಲು ಮುಂದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಜನರು ಅಗತ್ಯಕ್ಕಿಂತ ಹೆಚ್ಚಿನ ಉಪ್ಪು ಸೇವಿಸುವುದನ್ನು ತಪ್ಪಿಸುವಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಆರೋಗ್ಯಕ್ಕೆ ಪೂರಕವಾದ ಉಪ್ಪಿನ ಬಳಕೆಗೆ ಉತ್ತೇಜನ ನೀಡುವ ಜತೆಗೆ, ಉಪ್ಪಿನ ಸೇವನೆಯ ಪ್ರಮಾಣದ ಬಗ್ಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವ ಚಿಂತನೆ ನಡೆದಿದೆ. ಗ್ರಾಹಕರಿಗೆ ನೇರವಾಗಿ ಮಾಹಿತಿ ತಲುಪಿಸುವ ಉದ್ದೇಶದಿಂದ ಉಪ್ಪಿನ ಪ್ಯಾಕೆಟ್‌ಗಳ ಮೇಲೆಯೇ ಆರೋಗ್ಯ ಎಚ್ಚರಿಕೆ ಮುದ್ರಿಸುವ ಅಥವಾ ಸ್ಟಿಕ್ಕರ್ ಅಳವಡಿಸುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದರು.
ಕಣ್ಣಳತೆಯಲ್ಲಿ ಉಪ್ಪು ಹಾಕುವುದನ್ನು ತಪ್ಪಿಸಿ
ಉಪ್ಪಿನ ಬಳಕೆಯ ಪ್ರಮಾಣವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಪ್ಯಾಕೆಟ್‌ಗಳೊಂದಿಗೆ ಸೂಕ್ತ ಪ್ರಮಾಣ ಸೂಚಿಸುವ ಸಣ್ಣ ಚಮಚ ನೀಡುವ ಸಲಹೆಯನ್ನೂ ಸಚಿವರು ಮುಂದಿಟ್ಟಿದ್ದಾರೆ. ಅಂದರೆ, ಅಡುಗೆ ಮಾಡುವಾಗ ಕಣ್ಣಳತೆಯಲ್ಲಿ ಉಪ್ಪು ಹಾಕುವ ಬದಲು ಅಗತ್ಯ ಪ್ರಮಾಣವನ್ನು ಅಳೆಯುವ ಅಭ್ಯಾಸ ಬೆಳೆಸುವ ಉದ್ದೇಶ ಹೊಂದಲಾಗಿದೆ. ಆರೋಗ್ಯಕ್ಕೆ ಹಾನಿಕಾರಕ ಆಹಾರ ಪದ್ಧತಿಗಳನ್ನು ನಿಯಂತ್ರಿಸಲು ಶಾಲಾ-ಕಾಲೇಜುಗಳಲ್ಲಿಯೂ ಪ್ರತ್ಯೇಕ ಮಾರ್ಗಸೂಚಿ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.
ಇದನ್ನೂ ಓದಿ:
ತಜ್ಞರು ಸಲಹೆ ಏನು?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಯಸ್ಕರು ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸುವುದು ಸೂಕ್ತ. ಅಡುಗೆಯ ವೇಳೆ ಉಪ್ಪಿನ ಪ್ರಮಾಣ ಕಡಿಮೆ ಮಾಡುವುದರ ಜತೆಗೆ ಉಪ್ಪಿನಕಾಯಿ, ಚಟ್ನಿ, ಪ್ಯಾಕೆಟ್ ಸ್ನ್ಯಾಕ್ಸ್, ಇನ್‌ಸ್ಟಂಟ್ ಹಾಗೂ ರೆಡಿ-ಟು-ಈಟ್ ಆಹಾರಗಳ ಬಳಕೆಯನ್ನೂ ಮಿತಿಗೊಳಿಸುವುದು ಅಗತ್ಯ. ಸಂಸ್ಕರಿತ ಆಹಾರಗಳಲ್ಲಿಯೂ ಹೆಚ್ಚಿನ ಪ್ರಮಾಣದ ಸೋಡಿಯಂ ಇರುವ ಸಾಧ್ಯತೆಯಿರುವುದರಿಂದ ಪ್ಯಾಕೆಟ್ ಮೇಲಿನ ಪೌಷ್ಟಿಕಾಂಶ ಮಾಹಿತಿಯನ್ನು ಪರಿಶೀಲಿಸುವಂತೆ ತಜ್ಞರು ಸಲಹೆ ನೀಡುತ್ತಾರೆ.
ಊಟಕ್ಕೆ ಮುನ್ನ ರುಚಿ ನೋಡದೇ ಹೆಚ್ಚುವರಿಯಾಗಿ ಉಪ್ಪು ಸೇರಿಸುವ ಅಭ್ಯಾಸಕ್ಕೂ ಕಡಿವಾಣ ಹಾಕುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸುವುದಲ್ಲ, ಅಗತ್ಯವಿರುವಷ್ಟು ಮಾತ್ರ ಬಳಸುವ ಅಭ್ಯಾಸ ಬೆಳೆಸುವುದೇ ಈ ಕ್ರಮದ ಮುಖ್ಯ ಉದ್ದೇಶ.
ಜನರ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳ ಮೂಲಕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸರ್ಕಾರದ ಈ ಪ್ರಯತ್ನ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂಬುದು ಅದರ ಅನುಷ್ಠಾನದ ಮೇಲೆ ಅವಲಂಬಿತವಾಗಿದೆ.



