ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಗಳಿಗೆ ನೀಡಲಾದ ಸರ್ಕಾರಿ ಕಾಮಗಾರಿಗಳ ಟೆಂಡರ್ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಆರೋಪಗಳ ಗಂಭೀರತೆಯನ್ನು ಗಮನಿಸಿದ ನ್ಯಾಯಾಲಯ, ಸಿಬಿಐಗೆ ಎರಡು ವಾರಗಳೊಳಗೆ ಪ್ರಾಥಮಿಕ ತನಿಖೆ ಆರಂಭಿಸುವಂತೆ ಸೂಚಿಸಿದ್ದು, 16 ವಾರಗಳಲ್ಲಿ ಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠ ನೀಡಿದ ಆದೇಶದಂತೆ, 2015ರ ಜನವರಿ 1ರಿಂದ 2025ರ ಡಿಸೆಂಬರ್ 31ರವರೆಗೆ ರಾಜ್ಯದಲ್ಲಿ ಜಾರಿಗೊಂಡ ಸಾರ್ವಜನಿಕ ಕಾಮಗಾರಿಗಳು, ಟೆಂಡರ್ಗಳು ಹಾಗೂ ಕೆಲಸದ ಆದೇಶಗಳ ಸಂಪೂರ್ಣ ಪರಿಶೀಲನೆ ತನಿಖೆಯ ವ್ಯಾಪ್ತಿಗೆ ಒಳಪಡಲಿದೆ. ಸರ್ಕಾರದ ನಿಧಿ ಬಳಕೆ, ಟೆಂಡರ್ ಹಂಚಿಕೆ ಪ್ರಕ್ರಿಯೆ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬುದನ್ನು ಸಿಬಿಐ ಪರಿಶೀಲಿಸಲಿದೆ.
ಇದನ್ನೂ ಓದಿ:
ಅರ್ಜಿದಾರರಾದ ಎನ್ಜಿಒಗಳು ಕಳೆದ ಹತ್ತು ವರ್ಷಗಳಲ್ಲಿ ಮುಖ್ಯಮಂತ್ರಿ ಕುಟುಂಬಕ್ಕೆ ಸಂಬಂಧಿಸಿದ ನಾಲ್ಕು ಕಂಪನಿಗಳಿಗೆ ಸುಮಾರು ₹1,270 ಕೋಟಿ ಮೌಲ್ಯದ ಸರ್ಕಾರಿ ಒಪ್ಪಂದಗಳು ನೀಡಲಾಗಿದೆ ಎಂದು ಆರೋಪಿಸಿವೆ. ಈ ವಿಚಾರದಲ್ಲಿ ಸ್ಪಷ್ಟ ಹಿತಾಸಕ್ತಿ ಸಂಘರ್ಷ (conflict of interest) ಕಂಡುಬರುತ್ತದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಪ್ರಕರಣದಲ್ಲಿ ಸಿಎಂ ಪೆಮಾ ಖಂಡು, ಅವರ ಕುಟುಂಬ ಸದಸ್ಯರು ಹಾಗೂ ಸಂಬಂಧಿತ ಕಂಪನಿಗಳ ಹೆಸರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿದೆ. ವಿಶೇಷವಾಗಿ ಕುಟುಂಬಕ್ಕೆ ಸಂಬಂಧಿಸಿದ ಕೆಲವು ಕಂಪನಿಗಳು ಹಲವು ಸರ್ಕಾರಿ ಟೆಂಡರ್ಗಳನ್ನು ಪಡೆದುಕೊಂಡಿವೆ ಎಂಬ ಆರೋಪ ಪ್ರಕರಣಕ್ಕೆ ರಾಜಕೀಯ ತೀವ್ರತೆ ತಂದಿದೆ.
ಈ ಆದೇಶದೊಂದಿಗೆ ಅರುಣಾಚಲ ಪ್ರದೇಶದ ರಾಜಕೀಯದಲ್ಲಿ ಚರ್ಚೆ ತೀವ್ರಗೊಂಡಿದ್ದು, ಸಿಬಿಐ ತನಿಖೆಯ ವರದಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಗಮನ ಕೇಂದ್ರೀಕೃತವಾಗಿದೆ.



