ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಧುರಂಧರ್ 2 ಚಿತ್ರಕ್ಕೆ ಇದೀಗ ಕ್ರಿಕೆಟ್ ಲೋಕದಿಂದಲೂ ದೊಡ್ಡ ಮೆಚ್ಚುಗೆ ಸಿಕ್ಕಿದೆ. ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಈ ಸಿನಿಮಾವನ್ನು ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದು, ಚಿತ್ರವನ್ನು “ಅದ್ಭುತ ಸಿನೆಮ್ಯಾಟಿಕ್ ಅನುಭವ” ಎಂದು ಹೊಗಳಿದ್ದಾರೆ.
ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಕೊಹ್ಲಿ, ಭಾರತದಲ್ಲಿ ಈ ಮಟ್ಟದ ಸಿನಿಮಾ ಅನುಭವವನ್ನು ಇದುವರೆಗೆ ನೋಡಿಲ್ಲ ಎಂದು ಬರೆದಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಸಾಗುವ ಈ ಚಿತ್ರ ಒಂದು ಕ್ಷಣವೂ ಬೇಸರ ತರಲಿಲ್ಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರವು ಪ್ರತಿಯೊಂದು ಭಾವನೆಯನ್ನು ಹೊರತಂದಿದೆ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ:
ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ದೃಷ್ಟಿಕೋನ ಮತ್ತು ಪರಿಶ್ರಮವನ್ನು ವಿಶೇಷವಾಗಿ ಹೊಗಳಿದ ಕೊಹ್ಲಿ, “ನಿಮ್ಮ ಪ್ರತಿಭೆ ಮತ್ತು ದೃಢನಿಶ್ಚಯ ಈ ಸಿನಿಮಾದ ಪ್ರತಿಯೊಂದು ಫ್ರೇಮ್‌ನಲ್ಲಿ ಕಾಣುತ್ತದೆ” ಎಂದು ಪ್ರಶಂಸಿಸಿದ್ದಾರೆ. ಇದೇ ವೇಳೆ ನಾಯಕ ನಟ ರಣವೀರ್ ಸಿಂಗ್ ಅವರ ಅಭಿನಯಕ್ಕೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಅವರು ಮತ್ತೊಂದು ಹಂತ ತಲುಪಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲೂ ಧುರಂಧರ್ 2 ಭರ್ಜರಿ ದಾಖಲೆ ನಿರ್ಮಿಸಿದೆ. ಭಾರತದಲ್ಲಿ ₹1000 ಕೋಟಿ ಗಡಿ ದಾಟಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಯನ್ನು ಈ ಸಿನಿಮಾ ಪಡೆದಿದ್ದು, ಜಾಗತಿಕ ಮಟ್ಟದಲ್ಲೂ ಭಾರೀ ಕಲೆಕ್ಷನ್ ಮುಂದುವರಿದಿದೆ.



