ಯೋಚನೆ ಮಾಡುವುದು ಮನುಷ್ಯನ ಸಹಜ ಗುಣ. ಆದರೆ ಯಾವುದೋ ಒಂದು ವಿಷಯದ ಬಗ್ಗೆ ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ಕೊರಗುವುದು, ಕೆಟ್ಟದ್ದನ್ನೇ ಊಹಿಸಿಕೊಳ್ಳುವುದು ನಮ್ಮ ದೇಹದ ಮೇಲೆ ವಿಷದಂತೆ ಕೆಲಸ ಮಾಡುತ್ತದೆ.
ಯಾವಾಗಲೂ ಅತಿಯಾಗಿ ಯೋಚಿಸುವುದರಿಂದ ಮೆದುಳು ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಇದು ನಿರಂತರ ಭಯ, ಆತಂಕ ಮತ್ತು ಕ್ರಮೇಣ ತೀವ್ರವಾದ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ.
ರಾತ್ರಿ ಮಲಗಿದಾಗಲೂ ಮೆದುಳು ಯೋಚನೆಗಳಲ್ಲಿ ಮುಳುಗಿದ್ದರೆ, ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ಉತ್ಪತ್ತಿ ಕಡಿಮೆಯಾಗುತ್ತದೆ. ಇದರಿಂದ ನಿದ್ರೆಯ ಗುಣಮಟ್ಟ ಹಾಳಾಗಿ, ಹಗಲಿಡೀ ಸುಸ್ತು ಮತ್ತು ಆಲಸ್ಯ ಕಾಡುತ್ತದೆ.
ಅತಿಯಾದ ಆಲೋಚನೆಯಿಂದ ದೇಹದಲ್ಲಿ ‘ಕಾರ್ಟಿಸೋಲ್’ ಎಂಬ ಒತ್ತಡದ ಹಾರ್ಮೋನ್ ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸಿ, ಹೃದಯಾಘಾತ ಅಥವಾ ಇತರ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು.
ಮನಸ್ಸಿಗೂ ಹೊಟ್ಟೆಗೂ ನೇರ ಸಂಬಂಧವಿದೆ. ಅತಿಯಾದ ಮಾನಸಿಕ ಒತ್ತಡವು ಅಜೀರ್ಣ, ಗ್ಯಾಸ್ಟ್ರಿಕ್, ಎದೆಯುರಿ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಸದಾ ನಕಾರಾತ್ಮಕವಾಗಿ ಯೋಚಿಸುವವರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದರಿಂದಾಗಿ ಸಣ್ಣಪುಟ್ಟ ವೈರಾಣು ಸೋಂಕುಗಳು ಮತ್ತು ಜ್ವರದಂತಹ ಸಮಸ್ಯೆಗಳು ಬೇಗನೆ ಒಕ್ಕರಿಸುತ್ತವೆ.
ಮಾನಸಿಕ ಒತ್ತಡವು ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಮುಖದ ಮೇಲೆ ಸುಕ್ಕುಗಳು ಮೂಡುವುದು, ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಮತ್ತು ಕೂದಲು ಉದುರುವಿಕೆ ಓವರ್ ಥಿಂಕಿಂಗ್‌ನ ಅಡ್ಡಪರಿಣಾಮಗಳು.



