October 8, 2026
Thursday, October 8, 2026
spot_img

‘ಮತದಾರರ ಪಟ್ಟಿ ನೆಪದಲ್ಲಿ ಕಾಂಗ್ರೆಸ್‌ನಿಂದ ದೇಶಾದ್ಯಂತ ಅರಾಜಕತೆ ಸೃಷ್ಟಿ’: ಬಿ.ವೈ. ವಿಜಯೇಂದ್ರ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

CEC ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ  ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡು ದೆಹಲಿ ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಮತ್ತು ‘ಇಂಡಿಯಾ’ ಒಕ್ಕೂಟದ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ʼಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಮತ್ತು ದೇಶದಲ್ಲಿ ಅನಗತ್ಯವಾಗಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆʼ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾಂಗ್ರೆಸ್ ಧಕ್ಕೆ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ʼಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ನಿಯಮಾನುಸಾರವಾಗಿ ಪರಿಷ್ಕರಣೆ ಮಾಡುತ್ತಿದೆ. ಆದರೆ, ಮುಂಬರುವ ಚುನಾವಣೆಗಳಲ್ಲಿ ತಮಗೆ ಸೋಲಾಗುವ ಭೀತಿಯಿಂದ ಕಾಂಗ್ರೆಸ್ ನಾಯಕರು ಮುಂಚಿತವಾಗಿಯೇ ಇಂತಹ ಸುಳ್ಳು ಹಗರಣಗಳನ್ನು ಸೃಷ್ಟಿಸುತ್ತಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಬೆಂಗಳೂರಿನಲ್ಲಿ ಪ್ರಕಾಶ್ ರಾಜ್ ಅವರನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಹೈಡ್ರಾಮಾ ಕೇವಲ ರಾಜಕೀಯ ಗಿಮಿಕ್ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನ ಇಬ್ಬಂದಿ ನೀತಿ ಬಯಲು

ಕಾಂಗ್ರೆಸ್ ಪಕ್ಷಕ್ಕೆ ದೇಶದ ಕಾನೂನು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಿಂಚಿತ್ತೂ ಗೌರವವಿಲ್ಲ. ಕರ್ನಾಟಕದಲ್ಲಿ ಅವರು ಗೆದ್ದಾಗ ಚುನಾವಣಾ ಆಯೋಗ ಚೆನ್ನಾಗಿರುತ್ತದೆ, ಆದರೆ ಬೇರೆ ರಾಜ್ಯಗಳಲ್ಲಿ ಸೋತಾಗ ಆಯೋಗದ ಮೇಲೆ ಗೂಬೆ ಕೂರಿಸುತ್ತಾರೆ. ಇಂತಹ ಇಬ್ಬಂದಿ ನೀತಿಯನ್ನು ದೇಶದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದರು. ಅಲ್ಲದೆ, ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಇಂತಹ ದಮನಕಾರಿ ಪ್ರತಿಭಟನೆಗಳನ್ನು ಬಿಟ್ಟು ಕಾಂಗ್ರೆಸ್ ನಾಯಕರು ಜನರ ನಿಜವಾದ ಸಮಸ್ಯೆಗಳ ಕಡೆ ಗಮನ ಹರಿಸಲಿ ಎಂದು ಅವರು ಎಚ್ಚರಿಕೆ ನೀಡಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಶಾಸಕರುಗಳೇ ಬದುಕಿರುವವರ ಹೆಸರುಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರವೇ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ನಮ್ಮ ಮೇಲೆ ಸುಳ್ಳು ಆರೋಪ ಹೊರಿಸುವುದು ಹಾಸ್ಯಾಸ್ಪದ ಎಂದಿದ್ದಾರೆ.

Must Read