ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸಿ ಹೊಸ ಇತಿಹಾಸ ಬರೆಯುತ್ತಿದೆ. ದೇಶಾದ್ಯಂತ ಕ್ರಿಕೆಟಿಗರು, ರಾಜಕೀಯ ಗಣ್ಯರು ಚಿತ್ರವನ್ನು ಕೊಂಡಾಡುತ್ತಿದ್ದರೆ, ನಾಯಕ ನಟ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ಮಾತ್ರ ಚಿತ್ರದ ಬಗ್ಗೆ ಎಲ್ಲಿಯೂ ಪ್ರತಿಕ್ರಿಯಿಸಿರಲಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿತ್ತು.
ಮಾರ್ಚ್ 23ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದ ವಿಡಿಯೋವೊಂದರಲ್ಲಿ, ದೀಪಿಕಾ ಪಡುಕೋಣೆ ಅವರು ಪತಿಯ ಸಿನಿಮಾವನ್ನೇ ನೋಡಿಲ್ಲ ಎಂದು ಟೀಕಿಸಲಾಗಿತ್ತು. ಇದಕ್ಕೆ ಖುದ್ದಾಗಿ ಕಮೆಂಟ್ ಮಾಡಿರುವ ದೀಪಿಕಾ, “ನೀವೆಲ್ಲರೂ ಸಿನಿಮಾ ನೋಡುವುದಕ್ಕಿಂತ ಮುಂಚೆಯೇ ನಾನು ‘ಧುರಂಧರ್ 2’ ನೋಡಿದ್ದೇನೆ. ನನ್ನನ್ನು ಮೂರ್ಖ ಎಂದು ಬಿಂಬಿಸಲು ಬಂದು, ನಿಮ್ಮ ಮೂರ್ಖತನವನ್ನೇ ನೀವೀಗ ಪ್ರದರ್ಶಿಸುತ್ತಿದ್ದೀರಿ” ಎಂದು ಖಾರವಾಗಿ ಉತ್ತರಿಸಿದ್ದಾರೆ.
ದೀಪಿಕಾ ಅವರ ಈ ಹಿಂದಿನ ಜೆಎನ್‌ಯು ಪ್ರತಿಭಟನೆಯ ಬೆಂಬಲ ಹಾಗೂ ಚಿತ್ರದ ಕಥಾಹಂದರವು ಬಲಪಂಥೀಯ ವಿಚಾರಧಾರೆಗೆ ಹತ್ತಿರವಾಗಿದೆ ಎಂಬ ಕಾರಣಕ್ಕೆ ಅವರು ಮೌನ ವಹಿಸಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಈಗ ದೀಪಿಕಾ ನೀಡಿದ ಸ್ಪಷ್ಟನೆಯಿಂದ ಅಂತಹ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಸದ್ಯ ದೀಪಿಕಾ ಅವರ ಈ ‘ಬೋಲ್ಡ್’ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.



