ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಚುನಾವಣಾ ಪ್ರಚಾರದ ವೇಳೆ ಗುಜರಾತ್ ಜನರ ಕುರಿತು ನೀಡಿದ್ದ ‘ಅನಕ್ಷರಸ್ಥ’ ಎಂಬ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಖರ್ಗೆ, “ಪ್ರಧಾನಿ ಮೋದಿ ಅವರೇ, ನೀವು ಗುಜರಾತ್‌ನ ಅನಕ್ಷರಸ್ಥ ಜನರನ್ನು ಮರುಳು ಮಾಡಬಹುದು, ಆದರೆ ಸುಶಿಕ್ಷಿತ ಕೇರಳದ ಜನರನ್ನಲ್ಲ” ಎಂದು ಹೇಳಿದ್ದರು. ಈ ಹೇಳಿಕೆಯು ಗುಜರಾತ್ ಜನತೆಗೆ ಮಾಡಿದ ಅವಮಾನ ಎಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ವಿವಾದದ ಸ್ವರೂಪ ಹೆಚ್ಚಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಖರ್ಗೆ, “ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿಯೇ ತಪ್ಪಾಗಿ ಅರ್ಥೈಸಲಾಗಿದೆ. ಗುಜರಾತ್ ಜನರ ಭಾವನೆ ನೋಯಿಸುವ ಉದ್ದೇಶ ನನಗಿಲ್ಲ. ಅವರ ಬಗ್ಗೆ ನನಗೆ ಸದಾ ಗೌರವವಿದೆ. ಆದರೂ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ” ಎಂದು ತಿಳಿಸಿದ್ದಾರೆ.
ಖರ್ಗೆ ಹೇಳಿಕೆಯನ್ನು ನಾಚಿಕೆಗೇಡು ಎಂದು ಕರೆದಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, “ಮಹಾತ್ಮ ಗಾಂಧಿ, ಸರ್ದಾರ್ ಪಟೇಲರಂತಹ ಮಹಾನ್ ವ್ಯಕ್ತಿಗಳನ್ನು ನೀಡಿದ ಮಣ್ಣಿನ ಜನರನ್ನು ಅನಕ್ಷರಸ್ಥರು ಎನ್ನುವುದು ಕಾಂಗ್ರೆಸ್‌ನ ಒಡೆದು ಆಳುವ ನೀತಿಯನ್ನು ತೋರಿಸುತ್ತದೆ” ಎಂದು ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ, ಚುನಾವಣಾ ಕಣದಲ್ಲಿ ಖರ್ಗೆ ಅವರ ಒಂದು ಮಾತು ಈಗ ರಾಷ್ಟ್ರಮಟ್ಟದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.



