September 29, 2026
Tuesday, September 29, 2026
spot_img

ಕ್ರೂರ ಕೊಲೆಯಲ್ಲ, ಅದು ಹಠಾತ್ ಪ್ರಚೋದನೆ! ಗರ್ಭಿಣಿ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಚೌರಾಯ್ ನಿವಾಸಿ ಶಿವ ಕಹಾರ್ ಎಂಬಾತ 2021ರ ಸೆಪ್ಟೆಂಬರ್ 18ರಂದು ತನ್ನ 7 ತಿಂಗಳ ಗರ್ಭಿಣಿ ಪತ್ನಿ ಕಿರಣ್ ಜೊತೆ ಗಲಾಟೆ ಮಾಡಿಕೊಂಡಿದ್ದನು. ಜಗಳದ ವೇಳೆ ಕಿರಣ್, “ನಿನ್ನಂಥ ಸಾವಿರ ಗಂಡಂದಿರನ್ನು ನಾನು ಹೊಂದಬಲ್ಲೆ” ಎಂದು ನಿಂದಿಸಿದ್ದರು. ಇದರಿಂದ ತೀವ್ರ ಕೋಪಗೊಂಡ ಶಿವ, ಕಲ್ಲಿನಿಂದ ತಲೆಗೆ ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದನು. ನಂತರ ಸ್ವತಃ ಪೊಲೀಸರಿಗೆ ಶರಣಾಗಿದ್ದ ಈತನಿಗೆ ಕೆಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಹೈಕೋರ್ಟ್ ತೀರ್ಪು ಮತ್ತು ಶಿಕ್ಷೆ ಕಡಿತ:

ಸ್ಥಳೀಯ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಮಹತ್ವದ ತೀರ್ಪು ನೀಡಿದೆ. ಇದು ಪೂರ್ವನಿಯೋಜಿತ ಕೊಲೆಯಲ್ಲ, ಬದಲಿಗೆ ಹಠಾತ್ ಪ್ರಚೋದನೆಯಿಂದ ನಡೆದ ಘಟನೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೋರ್ಟ್ ನೀಡಿದ ಪ್ರಮುಖ ಕಾರಣ:

“ಪತಿಯ ಮೌಲ್ಯ ಹಾಗೂ ಅಸ್ತಿತ್ವವನ್ನು ಪ್ರಶ್ನಿಸುವ ಪತ್ನಿಯ ನಿಂದನಾತ್ಮಕ ಮಾತುಗಳು ಹಠಾತ್ ಪ್ರಚೋದನೆಗೆ ಕಾರಣವಾಗುತ್ತವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆರೋಪಿಗೆ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದ ಹೈಕೋರ್ಟ್, ಐಪಿಸಿ ಸೆಕ್ಷನ್ 304 (ಭಾಗ-1) ರ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿ, 7 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಕಡಿತಗೊಳಿಸಿದೆ.

Must Read