ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಜೋರಾಗಿರುವ ನಡುವೆ ಪುದುಚೇರಿ ಮುಖ್ಯಮಂತ್ರಿ ಹಾಗೂ ಎಐಎನ್ಆರ್‌ಸಿ ಮುಖ್ಯಸ್ಥ ಎನ್. ರಂಗಸ್ವಾಮಿ ತಮ್ಮ ಸರಳ ನಡೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಯಾವುದೇ ವಿಶೇಷ ಭದ್ರತಾ ತೋರಾಟ ಅಥವಾ ಅತಿರೇಕದ ವ್ಯವಸ್ಥೆ ಇಲ್ಲದೆ, ಸಾಮಾನ್ಯ ನಾಗರಿಕರಂತೆ ಬೈಕ್‌ನಲ್ಲಿ ಮತಗಟ್ಟೆಗೆ ಆಗಮಿಸಿ ಅವರು ಮತ ಚಲಾಯಿಸಿದರು.
ಮಂಗಲಂ ಮತ್ತು ತಟ್ಟಂಚವಾಡಿ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ರಂಗಸ್ವಾಮಿ, ಬೆಳಗ್ಗೆಯೇ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಮತದಾನದ ಬಳಿಕವೂ ಅವರು ಅದೇ ಬೈಕ್‌ನಲ್ಲಿ ಹಿಂದಿರುಗಿದ್ದು, ಸ್ಥಳದಲ್ಲಿದ್ದ ಮತದಾರರು ಹಾಗೂ ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದರು. ಸಿಎಂ ಅವರ ಈ ಸರಳತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆತು ನಡೆಯುವ ಶೈಲಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:
ಘಟನೆಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದ್ದು, ಹಲವರು “ಜನನಾಯಕನ ಸರಳತೆ” ಎಂದು ಶ್ಲಾಘಿಸಿದ್ದಾರೆ. ಚುನಾವಣೆಯಂತಹ ಮಹತ್ವದ ಸಂದರ್ಭದಲ್ಲಿ ಮುಖ್ಯಮಂತ್ರಿಯೊಬ್ಬರು ಸಾಮಾನ್ಯರಂತೆ ನಡೆದುಕೊಂಡಿರುವುದು ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಮತದಾನ ಬಳಿಕ ಮಾತನಾಡಿದ ರಂಗಸ್ವಾಮಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಅವರು ಕರೆ ನೀಡಿದರು.



