July 27, 2026
Monday, July 27, 2026
spot_img

‘ಚರ್ಚೆ ಮಾಡದಿದ್ದರೂ ಮಸೂದೆ ಪಾಸ್ ಮಾಡುತ್ತೇವೆ’: ಪ್ರತಿಪಕ್ಷಕ್ಕೆ ಕಿರಣ್ ರಿಜಿಜು ಖಡಕ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಿರೋಧ ಪಕ್ಷಗಳು ಚರ್ಚೆಯನ್ನು ಬಹಿಷ್ಕರಿಸಿದರೂ ಸಹ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ–2026 ಅನ್ನು ಸರ್ಕಾರ ಅಂಗೀಕರಿಸಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಚರ್ಚೆಗೆ ಸಂಪೂರ್ಣ ಸಿದ್ಧವಿದೆ. ಆದರೆ ಪ್ರತಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸದಿದ್ದರೂ ಮಸೂದೆ ಅಂಗೀಕಾರದ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಹೇಳಿದರು. ಸಂಜೆ 5 ಗಂಟೆಗೆ ಮಸೂದೆ ಕುರಿತು ಎಂಟು ಗಂಟೆಗಳ ಚರ್ಚೆ ನಡೆಸುವ ಸಾಧ್ಯತೆಯಿದೆ.

ಬಾನ್ಸುರಿ ಸ್ವರಾಜ್, ತೇಜಸ್ವಿ ಸೂರ್ಯ, ಶಶಾಂಕ್ ಮಣಿ ತ್ರಿಪಾಠಿ, ಅನುರಾಗ್ ಠಾಕೂರ್, ಶ್ರೀಕಾಂತ್ ಶಿಂಧೆ, ಅರುಣ್ ಭಾರತಿ, ಅಲೋಕ್ ಸುಮನ್, ಅನುಪ್ರಿಯಾ ಪಟೇಲ್ ಮತ್ತು ಸಯಾಲಿ ಘೋಷ್ ಸೇರಿದಂತೆ ಸುಮಾರು 12 ಎನ್‌ಡಿಎ ನಾಯಕರನ್ನು ಶಾಸನದ ಕುರಿತು ಮಾತನಾಡಲು ಅಂತಿಮಗೊಳಿಸಲಾಗಿದೆ.

ಇದನ್ನೂ ಓದಿ:

ಇನ್ನೊಂದೆಡೆ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮಸೂದೆಯನ್ನು ನೇರವಾಗಿ ಅಂಗೀಕರಿಸದೆ ಸಂಸದೀಯ ಸ್ಥಾಯಿ ಸಮಿತಿ ಅಥವಾ ಜಂಟಿ ಸಂಸದೀಯ ಸಮಿತಿಗೆ (JPC) ಕಳುಹಿಸಬೇಕು ಎಂದು ಆಗ್ರಹಿಸಿವೆ. ಜೊತೆಗೆ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಜಿಜು, ದೇಶದ ವಿದ್ಯಾರ್ಥಿಗಳ ಆತಂಕಕ್ಕೆ ಸ್ಪಂದಿಸಿ ಈ ಮಸೂದೆ ತರಲಾಗಿದೆ ಎಂದು ಹೇಳಿದರು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಮತ್ತು ನಿಗದಿತ ಅವಧಿಯ ಶಿಕ್ಷೆಯಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕ ಹಾಗೂ ವಿಶ್ವಾಸಾರ್ಹಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಸುಧಾರಣಾ ಕ್ರಮಗಳ ಭಾಗವಾಗಿ ಈ ಮಸೂದೆ ತರಲಾಗಿದೆ ಎಂದು ಅವರು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !