ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನೆಗಳ ಮಳೆಗರೆದಿದ್ದಾರೆ. ಏಪ್ರಿಲ್ 16ರಿಂದ ಆರಂಭವಾಗಲಿರುವ ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳಿಗೆ ಇನ್ನೂ ಕರಡು ಪ್ರತಿ ನೀಡಿಲ್ಲ ಎಂಬುದನ್ನು ಅವರು ಗಂಭೀರವಾಗಿ ಎತ್ತಿಹಿಡಿದಿದ್ದಾರೆ.
ಮಸೂದೆ ಏನು ಪ್ರಸ್ತಾಪಿಸುತ್ತಿದೆ ಎಂಬುದು ತಿಳಿಯದೆ ಚರ್ಚೆ ನಡೆಸುವುದು ಸರಿಯಲ್ಲ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಲೋಕಸಭಾ ಸ್ಥಾನಗಳನ್ನು 543ರಿಂದ 800ಕ್ಕೂ ಹೆಚ್ಚು ಹೆಚ್ಚಿಸುವ ಪ್ರಸ್ತಾಪದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸದಸ್ಯರ ಸಂಖ್ಯೆ ಹೆಚ್ಚಾದರೆ ಸಂಸತ್ತಿನ ಕಾರ್ಯವೈಖರಿ, ಚರ್ಚೆಗೆ ಸಿಗುವ ಸಮಯ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಏನಾಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಅಗತ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಇದರ ನಡುವೆಯೇ ಕಾಂಗ್ರೆಸ್ ಪಕ್ಷವು ಏಪ್ರಿಲ್ 10ರಂದು ಕಾರ್ಯಕಾರಿ ಸಮಿತಿ ಸಭೆ ಕರೆಯಲು ತೀರ್ಮಾನಿಸಿದೆ. ಮಹಿಳಾ ಮೀಸಲಾತಿಯನ್ನು ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆಯಿಂದ ಬೇರ್ಪಡಿಸಿ 2011ರ ಅಂಕಿಅಂಶಗಳ ಆಧಾರದಲ್ಲಿ ಜಾರಿಗೊಳಿಸುವ ಸಾಧ್ಯತೆ ಇದೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಹೊಸ ಪ್ರಸ್ತಾಪ ಜಾರಿಯಾದರೆ ಲೋಕಸಭಾ ಸ್ಥಾನಗಳು ಸುಮಾರು 816ಕ್ಕೆ ಏರಿಕೆಯಾಗಬಹುದು ಮತ್ತು ಅದರಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆ ಇದೆ.
ಈ ವಿಚಾರ ಈಗ ಸಂಸತ್ ರಾಜಕೀಯದಲ್ಲಿ ಪ್ರಮುಖ ಚರ್ಚೆಯಾಗಿ ಮಾರ್ಪಟ್ಟಿದ್ದು, ವಿಶೇಷ ಅಧಿವೇಶನದ ಮೇಲೆ ದೇಶದ ಗಮನ ನೆಟ್ಟಿದೆ.



