ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಇರಾನ್ ನಡುವೆ ಕಿಚ್ಚು ಹತ್ತಿದ್ದ ಜಗಳಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ‘ಶಾಂತಿ ಮಂತ್ರ’ ಎಂಬ ನೀರು ಹಾಕಿದ್ದಾರೆ. ಎರಡು ವಾರಗಳ ಕಾಲ ಕದನ ವಿರಾಮಕ್ಕೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ, ಈಗ ಪಾಕಿಸ್ತಾನದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಬರೀ ಹಬ್ಬ ಅಷ್ಟೇ ಅಲ್ಲ, “ನಮ್ಮ ಪ್ರಧಾನಿಗೆ ಈಗಲೇ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟುಬಿಡಿ” ಎಂಬ ಕೂಗು ಇಸ್ಲಾಮಾಬಾದ್ನಿಂದ ಇಟಲಿಯವರೆಗೆ ಕೇಳಿಬರುತ್ತಿದೆ!
ಯುದ್ಧ ಆರಂಭವಾದ ಮೂರನೇ ವಾರದಲ್ಲಿ ಮಧ್ಯಸ್ಥಿಕೆ ಆರಂಭಿಸಿದ ಪಾಕಿಸ್ತಾನ, ಮಾರ್ಚ್ 23 ರಂದು ಅಧಿಕೃತವಾಗಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿತು. ಅಮೆರಿಕ ನೀಡಿದ 15 ಅಂಶಗಳ ಪ್ರಸ್ತಾಪವನ್ನು ಪಾಕಿಸ್ತಾನವು ಇರಾನ್ ಮುಂದಿಟ್ಟಿತ್ತು. ಇದರ ಫಲವಾಗಿ ಮಂಗಳವಾರ ತಡರಾತ್ರಿ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.
“ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಸಮಾಲೋಚನೆಯ ನಂತರವೇ ನಾನು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದೇನೆ” ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇತ್ತ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಪಾಕಿಸ್ತಾನದ ಮನವಿಗೆ ಮನ್ನಣೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಅದ್ಭುತ ರಾಜತಾಂತ್ರಿಕ ವಿಜಯಕ್ಕಾಗಿ ಷರೀಫ್ ಮತ್ತು ಅಸಿಮ್ ಮುನೀರ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಕರಾಚಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಒತ್ತಾಯಿಸಿದೆ. ಇಟಲಿಯ ಮಾಜಿ ಪ್ರಧಾನಿ ಪಾವೊಲೊ ಜೆಂಟಿಲೋನಿ ಕೂಡ ಪಾಕಿಸ್ತಾನದ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿ, ನೊಬೆಲ್ ಪ್ರಶಸ್ತಿಗೆ ಇವರು ಅರ್ಹರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ಸುತ್ತಿನ ಮಹತ್ವದ ಮಾತುಕತೆಗಳು ಈ ಶುಕ್ರವಾರ ಇಸ್ಲಾಮಾಬಾದ್ನಲ್ಲಿ ನಡೆಯಲಿದ್ದು, ಇಡೀ ವಿಶ್ವದ ಕಣ್ಣು ಈಗ ಪಾಕಿಸ್ತಾನದ ಮೇಲಿದೆ.



