ಹೊಸದಿಗಂತ ವರದಿ ಬೆಳಗಾವಿ :
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅತ್ಯಂತ ಮಹತ್ವದ ವಾರ್ಷಿಕ ಪ್ರಾಂತ ಪ್ರಚಾರಕರ ಸಭೆ ಇಂದಿನಿಂದ ಕುಂದಾನಗರಿ ಬೆಳಗಾವಿಯಲ್ಲಿ ಆರಂಭಗೊಂಡಿದೆ.
ಸಂಘದ ಶತಮಾನೋತ್ಸವ ವರ್ಷದ ಪೂರ್ವಸಿದ್ಧತೆ, ದೇಶಾದ್ಯಂತ ಸಂಘದ ಸಂಘಟನಾ ಚಟುವಟಿಕೆಗಳ ವಿಸ್ತರಣೆ ಹಾಗೂ ಸಮಕಾಲೀನ ರಾಷ್ಟ್ರೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಈ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಲಾಗಿದೆ. ದೇಶದ ವಿವಿಧ ಪ್ರಾಂತಗಳಿಂದ ಆಗಮಿಸಿರುವ ಪ್ರಾಂತ ಪ್ರಚಾರಕರು, ಹಿರಿಯ ಪದಾಧಿಕಾರಿಗಳು ಹಾಗೂ ಪ್ರಮುಖ ಸಂಘಟನಾ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಜುಲೈ 10 ರಿಂದ 12 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಸಂಘದ ಮುಂದಿನ ಕಾರ್ಯಯೋಜನೆ, ಶತಮಾನೋತ್ಸವ ಆಚರಣೆಯ ರೂಪುರೇಷೆಗಳು, ಸೇವಾ ಚಟುವಟಿಕೆಗಳ ವಿಸ್ತರಣೆ, ಸಂಘಟನಾ ಬಲವರ್ಧನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಭದ್ರತೆಯನ್ನು ಅಭೂತಪೂರ್ವ ಮಟ್ಟದಲ್ಲಿ ಹೆಚ್ಚಿಸಲಾಗಿದೆ. ಸಭೆ ನಡೆಯುತ್ತಿರುವ ಪ್ರದೇಶ ಸಂಪೂರ್ಣವಾಗಿ ಪೊಲೀಸ್ ವಶದಲ್ಲಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಭಾ ಸ್ಥಳದ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಇಡೀ ಪ್ರದೇಶ ಪೊಲೀಸ್ ಛಾವಣಿಯಂತೆ ಕಾಣುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ವತಃ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಭಾ ಸ್ಥಳದ ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಗುರುತಿನ ಚೀಟಿ ಹೊಂದಿರುವ ಅಧಿಕೃತ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಸಭೆ ನಡೆಯುವ ಪ್ರದೇಶದಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅನಧಿಕೃತ ಡ್ರೋನ್ ಹಾರಾಟ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಇದರೊಂದಿಗೆ ಸಭಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ 24 ಗಂಟೆಗಳ ಕಾಲ ನಿಗಾದಲ್ಲಿರಿಸಲಾಗಿದೆ. ಭದ್ರತಾ ಕಾರಣಗಳಿಂದ ಸಭೆ ನಡೆಯುವ ಆವರಣಕ್ಕೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಭೆಯ ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಗೌಪ್ಯವಾಗಿ ನಡೆಸಲಾಗುತ್ತಿದ್ದು, ಸಂಘದ ಅಧಿಕೃತ ಪ್ರಕಟಣೆಗಳ ಮೂಲಕ ಮಾತ್ರ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ.
ಇದೇ ವೇಳೆ, ಸಂಘದ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಸಭೆ ರಾಜ್ಯ ಹಾಗೂ ರಾಷ್ಟ್ರೀಯ ರಾಜಕೀಯ ವಲಯದಲ್ಲೂ ಕುತೂಹಲ ಮೂಡಿಸಿದ್ದು, ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ಮತ್ತು ಮುಂದಿನ ಕಾರ್ಯತಂತ್ರಗಳತ್ತ ಹಲವು ವಲಯಗಳ ಗಮನ ಕೇಂದ್ರೀಕೃತವಾಗಿದೆ.



