ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ರುಚಿಗಳಲ್ಲಿ ಒಣ ಮೀನಿನ ಚಟ್ನಿ ಪುಡಿಗೆ ವಿಶೇಷ ಸ್ಥಾನವಿದೆ. ಬಿಸಿ ಬಿಸಿ ಅನ್ನಕ್ಕೆ ತುಪ್ಪ ಅಥವಾ ತೆಂಗಿನೆಣ್ಣೆ ಜೊತೆಗೆ ಈ ಚಟ್ನಿ ಪುಡಿ ಹಾಕಿ ಸವಿದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ದೋಸೆ, ಇಡ್ಲಿ ಅಥವಾ ರಾಗಿ ಮುದ್ದೆಯ ಜೊತೆಯೂ ಇದು ಅದ್ಭುತವಾಗಿ ಹೊಂದುತ್ತದೆ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಈ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಒಣ ಮೀನು – 50 ಗ್ರಾಂ (ಒಣಗಿದ ಅಂಜಲ್ / ಬಂಗುಡೆ)
ಕಾಯಿತುರಿ – 1 ಕಪ್
ಕೆಂಪು ಮೆಣಸಿನಕಾಯಿ – 5 ರಿಂದ 6
ಬೆಳ್ಳುಳ್ಳಿ ಎಸಳು – 4 ರಿಂದ 5
ಹುಣಸೆಹಣ್ಣು – ಸಣ್ಣ ತುಂಡು
ಎಣ್ಣೆ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಒಣ ಮೀನನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ. ಅದಕ್ಕೆ ಒಣ ಮೀನು ಹಾಕಿ ನಿಧಾನ ಉರಿಯಲ್ಲಿ ಹುರಿಯಿರಿ.
ಅದಾದ ಬಳಿಕ ಕಾಯಿತುರಿ, ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಹಾಗೂ ಹುಣಸೆಹಣ್ಣು ಸೇರಿಸಿ ಗರಿಗರಿಯಾಗುವವರೆಗೆ ಚೆನ್ನಾಗಿ ಹುರಿಯಿರಿ. ಎಲ್ಲಾ ಪದಾರ್ಥಗಳು ತಣ್ಣಗಾದ ನಂತರ ಉಪ್ಪು ಸೇರಿಸಿ ಮಿಕ್ಸರ್ ಜಾರಿನಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
ಟಿಪ್:
ಇದನ್ನು air-tight ಡಬ್ಬಿಯಲ್ಲಿ ಇಟ್ಟರೆ ಒಂದು ತಿಂಗಳಿಗೂ ಹೆಚ್ಚು ಕಾಲ ಹಾಳಾಗುವುದಿಲ್ಲ.



