ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಾಂಡೇಲಿ ನಗರದಲ್ಲಿ ಐಪಿಎಲ್ ಕ್ರಿಕೆಟ್ ಸೋಲು, ಗೆಲುವಿಗಾಗಿ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಐವರು ಬಂಧನಕ್ಕೊಳಗಾಗಿದ್ದಾರೆ
ನಗರದ ಅಂಬೇವಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ನಿರ್ಮಲ ನಗರದ ಅನಿಲ್ ಲಕ್ಷ್ಮಣ್ ಬಳ್ಳಾರಿ, ಟಿ ಆರ್ ಟಿ ಕ್ರಾಸ್ ಹತ್ತಿರದ ಬಾಲರಾಜ ನಾಗೇಶ ಗಿರಿಯಾಲ ಹಾಗೂ ಶ್ರವಣ್ ಇವರು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಸೋಲು ಗೆಲುವಿಗಾಗಿ ಹಣವನ್ನು ತೊಡಗಿಸಿ ಜೂಜಾಟ ನಡೆಸುತ್ತಿರುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಈ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 25,000 ರೂ ನಗದು ಹಣ ಹಾಗೂ ಮೂರು ಮೊಬೈಲ್ ಮತ್ತು ಇನ್ನಿತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಗರದ ಅಂಬೇವಾಡಿಯಲ್ಲಿರುವ ಜಿ ಪ್ಲಸ್ ಟು ನಿವೇಶನದ ಹತ್ತಿರ ಬಾಂಬೆಚಾಳ ನಿವಾಸಿ ಇಮ್ಯಾನವೆಲ್ ಬೈಲಾ ಹಾಗೂ ಸುಭಾಸ ನಗರದ ಬಸವರಾಜ ಅಲಿಯಾಸ್ ಭರತ್ ನಾಗೇಶ್ ಗಿರಿಯಾಲ ಎಂಬ ಇಬ್ಬರು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಹಣ ತೊಡಗಿಸಿ ಜೂಜಾಟ ನಡೆಸುತ್ತಿದ್ದರಲ್ಲದೆ, ಶ್ರವಣ ಎಂಬಾತನೊಂದಿಗೆ ಮೊಬೈಲ್ ಮೂಲಕ ಹಣ ತೊಡಗಿಸಿ ಬೆಟ್ಟಿಂಗ್ ಕಟ್ಟಿರುತ್ತಾರೆ. ಈ ಮೂವರನ್ನೂ ಬಂಧಿಸಿರುವ ಪೊಲೀಸರು ಇವರಿಂದ 3,000 ರೂ ನಗದು ಹಾಗೂ ಬೆಲೆಬಾಳುವ ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.



