ಹೊಸದಿಗಂತ ವರದಿ ಚಿತ್ರದುರ್ಗ:
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟು ಹೋಗುವ ಅಥವಾ ವೋಟ್ ಮಿಸ್ ಆಗುವುದನ್ನು ತಪ್ಪಿಸಲು ಸಾರ್ವಜನಿಕರು ಕೂಡಲೇ ಎನುಮರೇಷನ್ ಫಾರಂಗಳನ್ನು ಭರ್ತಿ ಮಾಡಿ ಬಿಎಲ್‌ಓಗಳಿಗೆ ಸಲ್ಲಿಸಿ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಎಲ್‌ಎ-೧ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ ಮನವಿ ಮಾಡಿದರು.
ನಗರದ ಗೋಪಾಲಪುರದ ತಿಪ್ಪಿನಘಟ್ಟಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎಸ್‌ಆರ್‌ಆರ್ ಮಹಾ ಸಂಪರ್ಕ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ನಾಗರಿಕನ ಭಾಗವಹಿಸುವಿಕೆಯಿಂದ ಮಾತ್ರ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅರ್ಧ ಗಂಟೆ ಸಮಯ ಮೀಸಲಿಟ್ಟು ಅಗತ್ಯ ಮಾಹಿತಿ ಹುಡುಕಿ, ಫಾರಂ ಭರ್ತಿ ಮಾಡಿ ತಕ್ಷಣ ಸಲ್ಲಿಸಬೇಕಿದೆ. ಇನ್ನೂ ಯಾರು ಮತದಾರರ ಫಾರಂಗಳನ್ನು ವಾಪಸ್ ನೀಡಿಲ್ಲವೋ ಅವರು ಕೂಡಲೇ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳನ್ನು ಅಥವಾ ಬಿಜೆಪಿ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳನ್ನು ಸಂಪರ್ಕಿಸುವಂತೆ ಸಲಹೆ ಮಾಡಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಈ ಅಭಿಯಾನದ ಅಂಗವಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮನೆ-ಮನೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ೧೧,೦೦೦ ಕ್ಕೂ ಹೆಚ್ಚು ಅಥವಾ ಅನರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನು ಸುಮಾರು ೧೩,೦೦೦ ದಷ್ಟು ಸಂಶಯಾಸ್ಪದ ಅಥವಾ ಎರಡು ಕಡೆ ಹೆಸರುಗಳು ಕಂಡುಬಂದಿದ್ದು, ಡಾ|| ಸಿದಾರ್ಥ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಬಳಿಕ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ತಲುಪಿಸಲಾಗುವುದು. ಆಗಸ್ಟ್ ೮ ಅರ್ಜಿ ಸಲ್ಲಿಸಲು ಅವಕಾಶವಿದೆ. ೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಳ್ಳಬೇಕೆಂದು ವಿನಂತಿಸಿದರು.
ಇದನ್ನೂ ಓದಿ:
ಅಕ್ರಮ ನಿವಾಸಿಗಳು, ವಲಸಿಗರಿಗೆ ’ನಿವಾಸಿ ಪ್ರಮಾಣಪತ್ರ’ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಇದು ಸಂಪೂರ್ಣ ಸಂವಿಧಾನ ವಿರೋಧಿ ನೀತಿ. ಪೌರತ್ವ ಅಥವಾ ನಿವಾಸದ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಹೊರತು ರಾಜ್ಯ ಸರ್ಕಾರಕ್ಕಲ್ಲ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇತರ ಹೊರದೇಶಗಳಿಂದ ಬಂದು ಅಕ್ರಮವಾಗಿ ನೆಲೆಸಿರುವವರಿಗೆ ನೆರವಾಗಲು ಮತ್ತು ಜನರಿಗೆ ಮೋಸ ಮಾಡಲು ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಾಳೆಕಾಯಿ ರಾಮದಾಸ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ರೇಖಾ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಜಿಲ್ಲಾ ಸಹ ವಕ್ತಾರ ನವೀನ್ ಚಾಲುಕ್ಯ, ಎಸ್.ಸಿ. ಮೋರ್ಚಾ ಅಧ್ಯಕ್ಷ ಪರಶುರಾಮ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.



