ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದೆ.
ಪ್ರಕರಣದ ಒಟ್ಟು 21 ಆರೋಪಿಗಳ ಪೈಕಿ 17 ಮಂದಿ ದೋಷಿಗಳೆಂದು ಸಾಬೀತಾಗಿದೆ. 20ನೇ ಆರೋಪಿ ವಾಸುದೇವ ನಿಲಕೇಣಿ ಮತ್ತು 21ನೇ ಆರೋಪಿ ಸೋಮಶೇಖರ್ ನ್ಯಾಮಗೌಡ ಅವರನ್ನು ಕೋರ್ಟ್ ಬಿಡುಗಡೆ ಮಾಡಿದೆ.
ಎ-1 ಬಸವರಾಜ್ ಮುತ್ತಗಿ ಮತ್ತು ಎ-17 ಶಿವಾನಂದ ಬಿರಾದರ್ ಅವರು ಪ್ರಕರಣದಲ್ಲಿ ಸರ್ಕಾರಿ ಸಾಕ್ಷಿಗಳಾದ ಕಾರಣ ಅವರನ್ನು ನಿರ್ದೋಷಿ ಎಂದು ನ್ಯಾಯಾಲಯ ಪರಿಗಣಿಸಿದೆ. ಅಪರಾಧಿಗಳಿಗೆ ಎಷ್ಟು ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ ಎಂಬ ತೀರ್ಪನ್ನು ನ್ಯಾಯಾಲಯವು ನಾಳೆ ಪ್ರಕಟಿಸಲಿದೆ.
ಸಿಬಿಐ ನಡೆಸಿದ ತನಿಖೆಯ ಆಧಾರದ ಮೇಲೆ ನ್ಯಾಯಾಲಯವು ಈ ಕೆಳಗಿನ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದೆ:
ಸೆಕ್ಷನ್ 302: ಕೊಲೆ
ಸೆಕ್ಷನ್ 120B: ಕ್ರಿಮಿನಲ್ ಪಿತೂರಿ
ಸೆಕ್ಷನ್ 201: ಸಾಕ್ಷ್ಯ ನಾಶ
ಸೆಕ್ಷನ್ 148 & 149: ಮಾರಕಾಸ್ತ್ರಗಳೊಂದಿಗೆ ಗಲಭೆ ಮತ್ತು ಗುಂಪುಗೂಡುವುದು.
ತೀರ್ಪು ಹೊರಬಿದ್ದ ಬೆನ್ನಲ್ಲೇ ಎಲ್ಲಾ 17 ದೋಷಿಗಳನ್ನು ತಕ್ಷಣವೇ ಕಸ್ಟಡಿಗೆ ಪಡೆಯುವಂತೆ ನ್ಯಾಯಾಲಯವು ಸಿಬಿಐಗೆ ಸೂಚಿಸಿದೆ.
ಹಿನ್ನೆಲೆ:
2016ರಲ್ಲಿ ನಡೆದ ಯೋಗೇಶ್ ಗೌಡ ಅವರ ಹತ್ಯೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಅವರ ಮೇಲೆ ಪಿತೂರಿಯ ಆರೋಪ ಕೇಳಿಬಂದಿತ್ತು. ಸಿಬಿಐ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಜೈಲಿನಲ್ಲಿದ್ದುಕೊಂಡೇ ಚುನಾವಣೆ ಗೆದ್ದಿದ್ದ ಯೋಗೇಶ್ ಗೌಡರ ಸಾವು ಇಂದು ಅವರ ಕುಟುಂಬಕ್ಕೆ ನ್ಯಾಯ ಒದಗಿಸುವತ್ತ ಸಾಗಿದೆ.
ದೋಷಿಗಳ ಪಟ್ಟಿ:
ವಿಕ್ರಂ (ಎ2), ಕೀರ್ತಿಕುಮಾರ್ (ಎ3), ಸಂದೀಪ್ (ಎ4), ವಿನಾಯಕ (ಎ5), ಮಹಾಬಲೇಶ್ವರ (ಎ6), ಸಂತೋಷ (ಎ7), ದಿನೇಶ್ (ಎ8), ಅಶ್ವಥ್ (ಎ9), ಸುನೀಲ್ (ಎ10), ನಜೀರ್ ಅಹ್ಮದ್ (ಎ11), ಶಾನವಾಝ್ (ಎ12), ನೂತನ್ (ಎ13), ಹರ್ಶಿತ್ (ಎ14), ವಿನಯ ಕುಲಕರ್ಣಿ (ಎ15), ಚಂದ್ರಶೇಖರ್ ಇಂಡಿ (ಎ16), ವಿಕಾಸ್ ಕಲಬುರಗಿ (ಎ18), ಚನ್ನಕೇಶವ ಟಿಂಗರಿಕರ್ (ಎ19).



