ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು ನಗರದ ಜೀವನಾಡಿಯಾಗಿರುವ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇಂದು ಶನಿವಾರ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ಹಸಿರು ಮಾರ್ಗದ ರೈಲು ಪ್ರವೇಶಿಸುತ್ತಿದ್ದಂತೆಯೇ ಲೀಲಾವತಿ ಎಂಬ ಮಹಿಳೆಯೊಬ್ಬರು ಏಕಾಏಕಿ ಹಳಿಗೆ ಜಿಗಿದಿದ್ದಾರೆ. ಆದರೆ, ಸ್ಥಳದಲ್ಲಿದ್ದ ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಲೊಕೊ ಪೈಲಟ್ನ ಸಮಯಪ್ರಜ್ಞೆಯಿಂದಾಗಿ ಮಹಿಳೆಯ ಜೀವ ಕೂದಲೆಳೆ ಅಂತರದಲ್ಲಿ ಬದುಕುಳಿದಿದೆ.
ಇಂದು ಮಧ್ಯಾಹ್ನ ಸುಮಾರು 12:25 ರ ಸುಮಾರಿಗೆ ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಯುವತಿ ಹಳಿಗೆ ಹಾರಿದ್ದಾಳೆ. ಇದನ್ನು ತಕ್ಷಣ ಗಮನಿಸಿದ ಭದ್ರತಾ ಸಿಬ್ಬಂದಿ ತುರ್ತು ಬಟನ್ ಒತ್ತಿ ರೈಲನ್ನು ನಿಲ್ಲಿಸಿ, ವಿದ್ಯುತ್ ಕಡಿತಗೊಂಡ ಬಳಿಕ ಸಿಬ್ಬಂದಿ ಹಳಿಗಿಳಿದು ಮಹಿಳೆಯನ್ನು ಸುರಕ್ಷಿತವಾಗಿ ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ರೈಲು ಸಂಚಾರದಲ್ಲಿ ವ್ಯತ್ಯಯ
ಈ ಆಕಸ್ಮಿಕ ಘಟನೆಯಿಂದಾಗಿ ರಾಜಾಜಿನಗರ ನಿಲ್ದಾಣದಲ್ಲಿ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಮೂಡಿತ್ತು. ಸುರಕ್ಷತೆಯ ದೃಷ್ಟಿಯಿಂದ ಹಸಿರು ಮಾರ್ಗದಲ್ಲಿ ಸುಮಾರು 10 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ನಂತರ 12:34 ರ ಸುಮಾರಿಗೆ ಹಳಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಎಂದಿನಂತೆ ರೈಲು ಸಂಚಾರವನ್ನು ಪುನಾರಂಭಿಸಲಾಯಿತು. ಸದ್ಯ ಮಹಿಳೆ ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನೆಂಬುದರ ಕುರಿತು ಬಿಎಂಆರ್ಸಿಎಲ್ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



